ಪವರ್ ಮಿನಿಸ್ಟರ್ ಡಿಕೆಶಿಗೆ ಬೆಳ್ಳಂಬೆಳಿಗ್ಗೆ ಐಟಿ ಶಾಕ್

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ಬೆಂಗಳೂರು,ಆ.2- ಕಾಂಗ್ರೆಸ್ ಯುವ ನಾಯಕ, ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸ, ಕಚೇರಿ ಸೇರಿದಂತೆ ಹಲವು ಕಡೆ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ನಗದು ಹಾಗೂ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಗುಜರಾತ್‍ನಲ್ಲಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಾಟೀಲ್ ಗೆಲ್ಲಿಸಲು ಅಲ್ಲಿನ ಶಾಸಕರನ್ನು ಬೆಂಗಳೂರಿನ ಈಗಲ್‍ಟನ್ ರೆಸಾರ್ಟ್‍ಗೆ ಕರೆತರುವಲ್ಲಿ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು.

ಈ ಬೆಳವಣಿಗೆಗಳ ನಡುವೆಯೇ ಐಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯ ರವಿ, ಆಪ್ತ ಸಹಾಯಕ ಆಂಜನೇಯ ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸಿ ಐದು ಕೋಟಿ ನಗದು ಹಾಗೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಬಂಧಿಕರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಪ್ರಕರಣ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಅಹಮದ್ ಪಟೇಲ್ ಸೇರಿದಂತೆ ಮತ್ತಿತರ ಕಾಂಗ್ರೆಸ್ ನಾಯಕರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಎಲ್ಲಿಎಲ್ಲಿ ದಾಳಿ:

ಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಂಕೆರಿ ನಿವಾಸ, ದೆಹಲಿಯ ಸಪ್ತರ್‍ಜಂಗ್‍ನಲ್ಲಿರುವ ಮನೆ, ಕನಕಪುರ ಸಮೀಪದ ಸಂತೆಕೋಡಿಹಳ್ಳಿ ಎಸ್ಟೇಟ್‍ನಲ್ಲಿರುವ ಬಂಗಲೆ, ಹುಟ್ಟೂರು ದೊಡ್ಡಹಾಲಹಳ್ಳಿಯ ಮನೆ, ಕನಕಪುರದ ಹಂಚಿನಕಾರ್ಖಾನೆ ಬಳಿ ಇರುವ ಎರಡು ಬಂಗಲೆಗಳು, ವಿಧಾನಪರಿಷತ್ ಸದಸ್ಯ, ಸೋದರ ಸಂಬಂಧಿ ರವಿ ಅವರ ಕನಕಪುರದಲ್ಲಿರುವ ಮೈಸೂರು ರಸ್ತೆಯಲ್ಲಿರುವ ಮನೆ, ಸಂಸದ ಡಿ.ಕೆ.ಸುರೇಶ್ ಒಡೆತನದ ಕಚೇರಿ, ಮನೆ ಹಾಗೂ ಆಪ್ತ ಸಹಾಯಕ ಆಂಜನೇಯ ಅವರ ಮನೆ ಮೇಲೂ ದಾಳಿ ನಡೆಸಿದ್ದಾರೆ.  ಮೂಲಗಳ ಪ್ರಕಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಐದು ಕೋಟಿ ನಗದು ಹಾಗೂ ವ್ಯಾಪಾರ-ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬೆಳ್ಳಂಬೆಳಗ್ಗೆ ದಾಳಿ:

ಕಳೆದ ರಾತ್ರಿ ದೆಹಲಿಯಿಂದ ಆಗಮಿಸಿದ ಸಚಿವ ಡಿ.ಕೆ.ಶಿವಕುಮಾರ್ ನೇರವಾಗಿ ಬೆಂಗಳೂರು ಹೊರವಲಯದಲ್ಲಿರುವ ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿ ತಂಗಿದ್ದರು.  ಇತ್ತ ಕೇಂದ್ರ ಮೀಸಲು ಪಡೆಯವರು ಪೊಲೀಸರ ಬಿಗಿ ಭದ್ರತೆಯೊಂದಿಗೆ ಸುಮಾರು ಐದು ಇನೋವಾ ಕಾರುಗಳಲ್ಲಿ ಬಂದ 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

39 ಸ್ಥಳಗಳಲ್ಲಿ ತಪಾಸಣೆ:

10 ಮಂದಿ ಐಟಿ ಅಧಿಕಾರಿಗಳು ಈಗಲ್‍ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದು, ಗುಜರಾತ್ ಶಾಸಕರು ತಂಗಿರುವ ಹೋಟೆಲ್‍ನ ಪ್ರತಿ ಕೋಣೆಯನ್ನೂ ತಪಾಸಣೆ ನಡೆಸುತ್ತಿದ್ದಾರೆ.  ಉಳಿದ 10 ಮಂದಿ ಅಧಿಕಾರಿಗಳು ಮೂರು ತಂಡಗಳಾಗಿ ಪಿಆರ್‍ಪಿಎಫ್ ಭದ್ರತೆಯೊಂದಿಗೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ರವಿ ಅವರ ಮನೆಗಳ ಮೇಲೆ ದಾಳಿ ಮಾಡಿ ತೀವ್ರ ತಪಾಸಣೆ ಮಾಡಿದ್ದು, ಜತೆಗೆ ಸುಮಾರು 15 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ತಪಾಸಣೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.  ರಾಜ್ಯ ಸರ್ಕಾರದ ಅತ್ಯಂತ ಪ್ರಭಾವಿ ಸಚಿವರಾಗಿರುವ ಹಾಗೂ ಹೈಕಮಾಂಡ್‍ಗೆ ಪರಮಾಪ್ತರಾಗಿರುವ ಡಿ.ಕೆ.ಶಿವಕುಮಾರ್ ಮೇಲೆ ಮೊದಲಿನಿಂದಲೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿತ್ತು.

ಕಳೆದ ಎರಡು ತಿಂಗಳಿನಿಂದೀಚೆಗೆ ಕರ್ನಾಟಕ ಸರ್ಕಾರದಲ್ಲಿ ಮತ್ತು ಕಾಂಗ್ರೆಸ್‍ನಲ್ಲಿ ಅತ್ಯಂತ ಪ್ರಭಾವಿಗಳಾಗಿರವ ಮುಖಂಡರ ಹಿಟ್‍ಲೀಸ್ಟನ್ನು ಐಟಿ ಇಲಾಖೆ ತಯಾರು ಮಾಡಿದೆ. ಕೆಲವರ ಚಲನವಲನಗಳ ಮೇಲೆ ನಿಗಾ ಇಟ್ಟಿದೆ. ಫೋನ್ ಟ್ಯಾಪಿಂಗ್ ನಡೆಸಲಾಗುತ್ತಿದೆ ಎಂಬ ಮಾಹಿತಿಗಳು ಕೇಳಿ ಬಂದಿದ್ದವು.
ರಾಜ್ಯದ ಪ್ರಭಾವಿ ಸಚಿವರು ಹಾಗೂ ಮುಖಂಡರ ಮನೆಗಳ ಮೇಲೆ ಐಟಿ ದಾಳಿಗಳು ನಡೆಯಲಿವೆ ಎಂಬ ಮುನ್ಸೂಚನೆ ಇತ್ತಾದರೂ ಗುಜರಾತ್‍ನ ಶಾಸಕರು ಕರ್ನಾಟಕಕ್ಕೆ ವಲಸೆ ಬಂದಿರುವ ವೇಳೆಯೇ ದಾಳಿ ನಡೆದಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಕಾರ್ಯದರ್ಶಿಯಾಗಿರುವ ಅಹಮ್ಮದ್ ಪಟೇಲ್ ಗುಜರಾತ್‍ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹೇಗಾದರೂ ಮಾಡಿ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಗುಜರಾತ್‍ನಲ್ಲಿ ಆಪರೇಷನ್ ಕಮಲ ಆರಂಭಿಸಿ 6ಮಂದಿ ಶಾಸಕರ ರಾಜೀನಾಮೆ ಕೊಡಿಸಿತ್ತು. ಉಳಿದ ಶಾಸಕರನ್ನು ಕಾಪಾಡಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಹೈಕಾಮಂಡ್ 44 ಮಂದಿ ಶಾಸಕರನ್ನು ಕರ್ನಾಟಕಕ್ಕೆ ರವಾನಿಸಿದೆ. ಗುಜರಾತ್‍ನಿಂದ ಆಗಮಿಸಿದ ಶಾಸಕರಿಗೆ ಆತಿಥ್ಯ ನೀಡಲು ರಾಜ್ಯ ಕಾಂಗ್ರೆಸ್ ಮುಖಂಡರು ಹಿಂದೇಟು ಹಾಕಿದಾಗ ಡಿ.ಕೆ.ಶಿವಕುಮಾರ್ ಧೈರ್ಯವಾಗಿ ಆ ಜವಾಬ್ದಾರಿಯನ್ನು ಹೊತ್ತುಕೊಂಡರು.

ಗುಜರಾತ್‍ನಿಂದ ಆಗಮಿಸಿದ ಅಷ್ಟೂ ಶಾಸಕರಿಗೆ ಬಿಡದಿ ಬಳಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿ ತಂಗಲು ಅವಕಾಶ ಮಾಡಿಕೊಡಲಾಗಿದೆ. ಆತಿಥ್ಯದ ಜವಾಬ್ದಾರಿಯನ್ನು ಸಂಸದ ಡಿ.ಕೆ.ಸುರೇಶ್ ನಿಭಾಯಿಸುತ್ತಿದ್ದಾರೆ.  ಶತಾಯಗತಾಯ ಅಹಮ್ಮದ್ ಪಟೇಲ್ ಅವರನ್ನು ಸೋಲಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಇಂದು ಬೆಳಗ್ಗೆ ರೆಸಾರ್ಟ್ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ಪ್ರತಿಯೊಬ್ಬ ಶಾಸಕರನ್ನೂ ತಪಾಸಣೆಗೊಳಪಡಿಸಿದ್ದು, ಅವರ ಮೊಬೈಲ್, ಕಾಲ್ ರಿಜಿಸ್ಟ್ರಾರ್, ಮೆಸೇಜ್ ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲಿಸಿದ್ದಾರೆ ಎನ್ನಲಾಗಿದೆ.

ರೆಸಾರ್ಟ್ ಒಳ ಹಾಗೂ ಹೊರ ಹೋಗುವ ಪ್ರತಿಯೊಂದು ವಾಹನಗಳು ಮತ್ತು ಎಲ್ಲರನ್ನೂ ಐಟಿ ಅಧಿಕಾರಿಗಳು ತಪಾಸಣೆಗೆ ಒಳಪಡಿಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್, ಸುರೇಶ್, ರವಿ ಅವರ ಮನೆ ಹಾಗೂ ಇತರೆ ಸ್ಥಳಗಳ ಮೇಲೂ ದಾಳಿ ಮಾಡಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಯಾರನ್ನೂ ಒಳಬಿಡದೆ ಹಾಗೂ ಹೊರ ಹೋಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ಸಿಆರ್‍ಪಿಎಫ್ ಭದ್ರತೆಯೊಂದಿಗೆ ಆಗಮಿಸಿ ದಾಳಿ ಮಾಡಿರುವುದು ಐಟಿ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆಯ ಗಂಭೀರತೆಗೆ ಸಾಕ್ಷಿಯಾಗಿದೆ.

ಈ ಮೊದಲು ಹಲವಾರು ಬಾರಿ ಸುದ್ದಿಗಾರರೊಂದಿಗೆ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ತಮ್ಮ ಮೇಲೆ ಐಟಿ ಅಲ್ಲದೆ, ಬೇರೆ ಯಾವುದೇ ರೀತಿಯ ದಾಳಿ ನಡೆದರೂ ಹೆದರುವುದಿಲ್ಲ. ರಾಜಕೀಯ ಜೀವನದಲ್ಲಿ ಇಂತಹ ಬೆದರಿಕೆಗಳನ್ನು ಹಲವಾರು ನೋಡಿದ್ದೇನೆ ಎಂದು ಹೇಳುತ್ತಿದ್ದರು.
ಇಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಡಿಕೆಶಿ ಮತ್ತು ಅವರ ತಂಡ ಗಲಿಬಿಲಿಗೆ ಒಳಗಾಗಿದೆ ಎಂದು ಹೇಳಲಾಗಿದೆ.

ಉಳಿದ 10 ಮಂದಿ ಅಧಿಕಾರಿಗಳು ಮೂರು ತಂಡಗಳಾಗಿ ಪಿಆರ್‍ಪಿಎಫ್ ಭದ್ರತೆಯೊಂದಿಗೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ರವಿ ಅವರ ಮನೆಗಳ ಮೇಲೆ ದಾಳಿ ಮಾಡಿ ತೀವ್ರ ತಪಾಸಣೆ ಮಾಡಿದ್ದು, ಜತೆಗೆ ಸುಮಾರು 15 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ತಪಾಸಣೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದ ಅತ್ಯಂತ ಪ್ರಭಾವಿ ಸಚಿವರಾಗಿರುವ ಹಾಗೂ ಹೈಕಮಾಂಡ್‍ಗೆ ಪರಮಾಪ್ತರಾಗಿರುವ ಡಿ.ಕೆ.ಶಿವಕುಮಾರ್ ಮೇಲೆ ಮೊದಲಿನಿಂದಲೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿತ್ತು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin