ಕಾವ್ಯ ಕುಟುಂಬಕ್ಕೆ ಆಳ್ವಾಸ್ ಸಂಸ್ಥೆಯಿಂದ 50 ಲಕ್ಷ ರೂ ಪರಿಹಾರ ಕೊಡಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Kavya-Alva's

ಬೆಂಗಳೂರು,ಆ.3-ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಅಸಹಜವಾಗಿ ಮೃತಪಟ್ಟ ವಿದ್ಯಾರ್ಥಿನಿ ಕಾವ್ಯಪೂಜಾರಿ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ವಸೂಲಿ ಮಾಡಲು ಜಿಲ್ಲಾಡಳಿತಕ್ಕೆ ಸರ್ಕಾರ ನಿರ್ದೇಶನ ನೀಡಬೇಕೆಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ ಜಿಲ್ಲಾಡಳಿತ ಶಿಕ್ಷಣ ಸಂಸ್ಥೆಯಿಂದ 50 ಲಕ್ಷ ರೂ. ಕೊಡಿಸಿ ಕಾವ್ಯಾಳ ಕುಟುಂಬಕ್ಕೆ ನೆರವಾಗಬೇಕೆಂದರು.

ವಸತಿ ಶಾಲೆ ಹಾಸ್ಟೆಲ್ ನಡೆಸಲು ಆಳ್ವಾಸ್ ಶಿಕ್ಷಣ ಸಂಸ್ಥೆ ಅನುಮತಿ ಪಡೆದಿಲ್ಲ. ಕಾನೂನುಬಾಹಿರವಾಗಿ ನಡೆಸುತ್ತಿರುವುದು ಆ.1ರಂದು ಸಮಿತಿ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದಾಗ ತಿಳಿದುಬಂದಿದೆ ಎಂದರು.  ಕಾನೂನು ಬಾಹಿರ ಹಾಸ್ಟೆಲ್ ಮತ್ತು ವಸತಿ ಶಾಲೆಗಳಿಗೆ ನಿಯಂತ್ರಣ ಹೇರಲು ಕಟ್ಟುನಿಟ್ಟಿನ ಕಾನೂನು ರೂಪಿಸುವ ಅಗತ್ಯವಿದೆ. ಅಲ್ಲದೆ ಹಾಸ್ಟೆಲ್‍ನಲ್ಲಿ ಯಾವುದೇ ವಿದ್ಯಾರ್ಥಿಗಳು ಅಸ್ವಭಾವಿಕವಾಗಿ ಸಾವನ್ನಪ್ಪಿದರೆ ಸಂಸ್ಥೆಯೇ ಹೊಣೆಯಾಗಬೇಕೆಂಬ ಕಾನೂನು ತರಬೇಕಾಗಿದೆ. ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಸ್ಥಳೀಯ ಆಡಳಿತ ಈ ಸಂಬಂಧ ಕಾನೂನು ರೂಪಿಸಬೇಕು ಎಂದರು.

ಈ ಹಿಂದೆ ಬೆಂಗಳೂರಿನ ಕಾಡುಗೋಡೆ ಶಿಕ್ಷಣ ಸಂಸ್ಥೆ , ತುಮಕೂರು ಜಿಲ್ಲೆಯ ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮೃತಪಟ್ಟಾಗಲೂ ತಲಾ 50 ಲಕ್ಷ ಪರಿಹಾರ ಕೊಡಿಸುವಂತೆ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಣ ಮತ್ತು ವರದಿ ನೀಡುವ ತಜ್ಞರ ಸಮಿತಿ ಸಲಹೆ ನೀಡಿತ್ತು ಎಂದು ಹೇಳಿದರು.  ಆಳ್ವಾಸ್ ಸಂಸ್ಥೆಯಲ್ಲಿ 26 ಸಾವಿರ ವಿದ್ಯಾರ್ಥಿಗಳಿದ್ದು ವಾರ್ಷಿಕ ಸುಮಾರು 200 ಕೋಟಿ ವಸೂಲಾದರೂ ಸೂಕ್ತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಉಗ್ರಪ್ಪ ದೂರಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin