ಡಿಕೆಶಿ ಮೇಲೆ ಐಟಿ ಅಟ್ಯಾಕ್ ಹಿನ್ನೆಲೆಯಲ್ಲಿ ಗುಜರಾತ್ `ಕೈ’ ಶಾಸಕರ ಸ್ಥಳಾಂತರ..?

ಈ ಸುದ್ದಿಯನ್ನು ಶೇರ್ ಮಾಡಿ

DKS Gujarat

ಬೆಂಗಳೂರು, ಆ.3- ಇಂಧನ ಸಚಿವ ಡಿ.ಕೆ. ಶಿವಕುಮಾರ್ ಕಚೇರಿ ಹಾಗೂ ಮನೆ ಮೇಲೆ ನಿನ್ನೆಯಿಂದ ಐಟಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಡದಿ ಈಗಲ್‍ಟನ್ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ಬೇರೆಡೆ ತೆರಳಬೇಕೆಂದು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್‍ನಿಂದ ಬೆಂಗಳೂರಿಗೆ ಆಗಮಿಸಿದ 44 ಶಾಸಕರು ಬಿಡದಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಇವರ ಉಸ್ತುವಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯ ಎಸ್.ರವಿ ವಹಿಸಿದ್ದು, ಇವರೆಲ್ಲರ ನಿವಾಸ ಹಾಗೂ ಕಚೇರಿ ಮೇಲೆ ಐಟಿ ದಾಳಿ ನಡೆದಿದೆ.
ಇದರಿಂದ ಕಂಗಾಲಾಗಿರುವ ರೆಸಾರ್ಟ್‍ನಲ್ಲಿರುವ ಕಾಂಗ್ರೆಸ್ ಶಾಸಕರನ್ನು ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಕೆಲವು ಶಾಸಕರು ಗುಜರಾತ್‍ಗೆ ಹಿಂದಿರುಗುವ ಮಾತುಗಳನ್ನಾಡುತ್ತಿದ್ದಾರೆ ಎನ್ನಲಾಗಿದೆ.

ಗುಜರಾತ್‍ನಲ್ಲಿ ನಮ್ಮ ಮೇಲೆ ಐಟಿ ದಾಳಿ ನಡೆಯುವ ಸಾಧ್ಯತೆ ಇದೆ. ನಾವು ಅಲ್ಲಿಗೆ ತೆರಳಬೇಕಾಗಿದೆ ಎಂದು ಹಲವು ಶಾಸಕರು ಮುಂದಾಗಿರುವುದು ತಿಳಿದು ಬಂದಿದೆ. ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ಹೈಜಾಕ್ ಮಾಡುತ್ತಿದ್ದಾರೆ ಎಂಬ ಹಿನ್ನೆಲಯಲ್ಲಿ ಅಲ್ಲಿಂದ ಎಲ್ಲಾ ಶಾಸಕರನ್ನು ರಾಜ್ಯಕ್ಕೆ ಕರೆತಲಾಗಿತ್ತು.  ಬಿಡದಿಯ ರೆಸಾರ್ಟ್‍ನಲ್ಲಿ ಆ.7ವರೆಗೆ ವಾಸ್ತವ್ಯ ಹೂಡಿ 8ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಆದರೆ, ನಿನ್ನೆ ಏಕಾಏಕಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಆಪ್ತರು, ಸಂಬಂಧಿಕರು ಸೇರಿದಂತೆ 39 ಕಡೆ ಐಟಿ ದಾಳಿ ನಡೆಸಿದ್ದಲ್ಲದೆ, ಇಂದೂ ಕೂಡ ದಾಳಿ ಮುಂದುವರೆದಿರುವ ಹಿನ್ನೆಲೆಯಲ್ಲಿ ಸದ್ಯ ರೆಸಾರ್ಟ್‍ನಲ್ಲಿರುವ ಕಾಂಗ್ರೆಸ್ ಶಾಸಕರು ಆತಂಕಕ್ಕೊಳಗಾಗಿದ್ದಾರೆ. ನಿನ್ನೆ ದಾಳಿ ನಡೆಸಿದ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಗುಜರಾತ್ ಶಾಸಕರ ಕೊಠಡಿಗೂ ತೆರಳಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಇದರಿಂದ ಆತಂಕಕ್ಕೊಳಗಾಗಿರುವ ಅವರು, ಗುಜರಾತ್‍ಗೆ ಹಿಂದಿರುಗಲು ಮುಂದಾಗಿದ್ದಾರೆ ಎನ್ನಲಾಗಿದೆ.

ನಾವು ಕರ್ನಾಟಕದಲ್ಲಿದ್ದರೆ ಪರಿಸ್ಥಿತಿ ಹೀಗಿದೆ. ಇನ್ನು ಗುಜರಾತ್‍ನಲ್ಲಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತದೆ ಎಂದು ಹಲವರು ಆತಂಕಕ್ಕೊಳಗಾಗಿದ್ದು, ಕಾಂಗ್ರೆಸ್ ಮುಖಂಡರ ಬಳಿ ತಮ್ಮ ಪರಿಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin