ಡಿ.ಕೆ.ಶಿವಕುಮಾರ್ ಐಟಿ ರೇಡ್ ಬಗ್ಗೆ ಯಡಿಯೂರಪ್ಪ ಏನ್ ಹೇಳಿದ್ರು..?

Yadiyurappa--01-DKS

ನವದೆಹಲಿ , ಆ.3-ಇಂಧನ ಸಚಿವ ಡಿ.ಕೆ.ಶಿವಕುಮಾರ್ ದೇಶದಲ್ಲೇ 2ನೇ ಶ್ರೀಮಂತ ರಾಜಕಾರಣಿ. ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುವ ವೇಳೆ ಸಿಕ್ಕಿರುವ ಹಣದ ಮೂಲದ ಬಗ್ಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಬೇಕೆ ಹೊರತು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿ ಸಂಸ್ಥೆಯೊಂದಕ್ಕೆ ಡಿ.ಕೆ.ಶಿವಕುಮಾರ್ ಮತ್ತು ಅವರ ಸಂಬಂಧಿಕರ ಮೇಲಿನ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಎಸ್‍ವೈ, ಶಿವಕುಮಾರ್ ಒಬ್ಬ ಅಗರ್ಭ ಶ್ರೀಮಂತ ರಾಜಕಾರಣಿ ಎಂಬುದು ಎಲ್ಲರಿಗೂ ಗೊತ್ತು. ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು ಎಂಬುದನ್ನು ಜನತೆಯ ಮುಂದೆ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.

ಐಟಿ ಅಧಿಕಾರಿಗಳು ತಮ್ಮದೇ ಆದ ಮಾಹಿತಿ ಆಧರಿಸಿ ಯಾರ ಮೇಲೆ ಬೇಕಾದರೂ ದಾಳಿ ಮಾಡುತ್ತಾರೆ. ದಾಳಿ ವೇಳೆ ಸಿಕ್ಕಿರುವ ಮೂಲದ ಬಗ್ಗೆ ಮಾಹಿತಿ ನೀಡಬೇಕೆ ಹೊರತು ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತದೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿದ ನಂತರ ಸಿಬಿಐ ಹಾಗೂ ಲೋಕಾಯುಕ್ತ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ನನ್ನ ಪುತ್ರರ, ನಿವಾಸ ಹಾಗೂ ಸಂಬಂಧಿಕರ ಮೇಲೆ ದಾಳಿ ನಡೆಸಿದ್ದವು. ನಾನು ಇದನ್ನು ಕಾನೂನಾತ್ಮಕವಾಗಿ ಎದುರಿಸಿದ್ದೇನೆ ಹೊರತು ಯಾವುದೇ ಸರ್ಕಾರವನ್ನು ಟೀಕಿಸುವ ಪ್ರಯತ್ನ ಮಾಡಲಿಲ್ಲ ಎಂದರು.

ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ತನಿಖಾ ಸಂಸ್ಥೆಗಳು ತಮ್ಮದೇ ಆದ ಮಾಹಿತಿ ಆಧಾರದ ಮೇಲೆ ದಾಳಿ ಮಾಡುತ್ತವೆ. ನಮ್ಮ ಮೇಲೆ ಆಪಾದನೆಗಳು ಬಂದ ತಕ್ಷಣ ಕೇಂದ್ರ ಸರ್ಕಾರವನ್ನು ದೂಷಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.
ಕಾಂಗ್ರೆಸ್ ಹತಾಶೆಯಿಂದ ಡಿ.ಕೆ.ಶಿವಕುಮಾರ್ ರಕ್ಷಣೆ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದೆ. ಈಗಾಗಲೇ ಹಣಕಾಸು ಸಚಿವ ಅರುಣ್ ಜೇಟ್ಲಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಸಂಸತ್‍ನ ಉಭಯ ಸದನಗಳಲ್ಲಿ ಈ ವಿಷಯವನ್ನು ಮುಂದಿಟ್ಟುಕೊಂಡು ಕಲಾಪಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಯಾವುದೇ ದಾಳಿಗಳು ರಾಜಕೀಯ ಪ್ರೇರಿತವಾಗಿ ನಡೆಯುವುದಿಲ್ಲ. ಗುಜರಾತ್ ಶಾಸಕರು ಬೆಂಗಳೂರಿನ ರೆಸಾರ್ಟ್‍ನಲ್ಲಿ ಉಳಿದಿರುವುದಕ್ಕೂ ಐಟಿ ದಾಳಿಗೂ ಸಂಬಂಧವೇ ಇಲ್ಲ. ಆದರೆ ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಮುಂದಾಗಿರುವುದು ಹತಾಶೆಯ ಮನೋಭಾವನೆ ತೋರಿಸುತ್ತಿದೆ ಎಂದು ಟೀಕಿಸಿದರು.  ಡಿ.ಕೆ.ಶಿವಕುಮಾರ್ ಮನೆ ಮೇಲೆ ನಡೆದಿರುವ ದಾಳಿಗೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮ ಪಕ್ಷದ ಯಾವುದೇ ನಾಯಕರು ಇಂತಹ ಕ್ಷುಲ್ಲಕ ರಾಜಕಾರಣ ಮಾಡುವುದಿಲ್ಲ. ರಾಜ್ಯದ ಜನತೆ ಇಂತಹ ಆಧಾರ ರಹಿತ ಆರೋಪಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin