ತೆರೆಮೇಲೆ ಬಂದ್ರು ‘ರಾಜ್‍ವಿಷ್ಣು’

ಈ ಸುದ್ದಿಯನ್ನು ಶೇರ್ ಮಾಡಿ

Rajvishnu--01

ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಸಂಚಲನ ಮೂಡಿಸಲು ಬರುತ್ತಿದ್ದಾರೆ ರಾಜ್ ವಿಷ್ಣು. ಅದ್ಧೂರಿ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವ ನಿರ್ಮಾಪಕ ರಾಮು ಅವರ ನೇತೃತ್ವದ ರಾಮು ಫಿಲಂಸ್ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವ 37ನೆ ಚಿತ್ರ ಈ ರಾಜ್ ವಿಷ್ಣು. ಕಾಮಿಡಿ ಕಿಂಗ್ ಶರಣ್, ಹಾಸ್ಯನಟ ಚಿಕ್ಕಣ್ಣ ಒಟ್ಟಾಗಿ ಕಾಣಿಸಿಕೊಂಡಿರುವ ಈ ಚಿತ್ರ ರಾಜ್ಯಾದಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.  ತಮಿಳಿನಲ್ಲಿ ನಿರ್ಮಾಣಗೊಂಡು ಯಶಸ್ವಿಯಾಗಿದ್ದ ರಜನಿ ಮುರುಗನ್ ಚಿತ್ರದ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು ರಾಜ್ ವಿಷ್ಣು ಸಿನಿಮಾ ರೂಪಿಸಲಾಗಿದೆ. ಈ ಹಿಂದೆ ಅಧ್ಯಕ್ಷ ಚಿತ್ರಕ್ಕೆ ಕಥೆ ಬರೆದಿದ್ದ ಪೊನ್‍ರಾಜ್ ಅವರೇ ರಜನಿ ಮುರುಗನ್ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದರು. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಹಿಂದೆ ಆಕಾಶ್ ಮತ್ತು ಅರಸು ಚಿತ್ರಗಳಿಗೆ ಕಥೆ ಒದಗಿಸಿದ್ದ ಜನಾರ್ಧನ ಮಹರ್ಷಿ ಅವರೇ ರಾಜ್ ವಿಷ್ಣು ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ. ನಾಯಕ ಶರಣ್ ಮತ್ತು ನಾಯಕಿ ವೈಭವಿ ಕಾಂಬಿನೇಷನ್‍ನಲ್ಲಿ ಮೂಡಿಬಂದಿರುವ ನನ್ನೋಡುದ್ರೆ ಧೂಳ್ ಕಣ್ಣೋಡುದ್ರೆ ಧೂಳ್ ಎನ್ನುವ ಡ್ಯುಯೆಟ್ ಹಾಡು ಎಲ್ಲಾ ಕಡೆ ವೈರಲ್ ಆಗಿದೆ.

ಕೆ.ಮಾದೇಶ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಜೇಶ್ ಕಟ್ಟ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ ನೃತ್ಯ, ಥ್ರಿಲ್ಲರ್ ಮಂಜು, ವಿನೋದ್ ಅವರ ಸಾಹಸ ಸಂಯೋಜನೆ, ಯೋಗರಾಜ್ ಭಟ್, ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಗೀತರಚನೆ, ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಗೋಸ್ವಾಮಿ ಸಹ ನಿರ್ದೇಶನ, ಅನಿಲ್ ಕುಮಾರ್ ಅವರ ನಿರ್ಮಾಣ-ನಿರ್ವಹಣೆ ಈ ಚಿತ್ರಕ್ಕಿದೆ. ಶರಣ್ ಮತ್ತು ಚಿಕ್ಕಣ್ಣ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಸಾಧು ಕೋಕಿಲ, ರವಿಶಂಕರ್, ಶ್ರೀನಿವಾಸಮೂರ್ತಿ, ವೀಣಾ ಸುಂದರ್, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಮತ್ತು ಸ್ವಾತಿ ಸೇರಿದಂತೆ ಇನ್ನು ಅನೇಕರ ತಾರಾಗಣವಿದೆ.

ಈ ಚಿತ್ರ ಪ್ರೇಕ್ಷಕರನ್ನು ಸೆಳೆಯಲು ಬಹಳಷ್ಟು ಅಂಶಗಳನ್ನು ಒಳಗೊಂಡಿದೆಯಂತೆ. ಹಾಸ್ಯ, ಸೆಂಟಿಮೆಂಟ್ ಹಾಗೂ ಆ್ಯಕ್ಷನ್ ದೃಶ್ಯಗಳು ಕೂಡ ವಿಭಿನ್ನವಾಗಿ ಮೂಡಿಬಂದಿದೆ ಎಂಬುದು ಚಿತ್ರತಂಡದ ಅಭಿಪ್ರಾಯವಾಗಿದ್ದು, ಚಿತ್ರವನ್ನು ಅದ್ಧೂರಿ ಪ್ರಚಾರದ ಮೂಲಕ ತೆರೆ ಮೇಲೆ ತರುತ್ತಿದ್ದಾರೆ. ಪ್ರೇಕ್ಷಕ ಪ್ರಭುಗಳು ಈ ರಾಜ್ ವಿಷ್ಣುವನ್ನು ಯಾವ ರೀತಿ ಬರಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin