‘ಪವರ್’ಫುಲ್ ಮಿನಿಸ್ಟರ್ ಬೆಂಬಲಕ್ಕೆ ನಿಂತ ಒಕ್ಕಲಿಗರು

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ಬೆಂಗಳೂರು, ಆ.3- ಆಪರೇಷನ್ ಕಮಲದಿಂದ ಕಾಂಗ್ರೆಸ್ ಶಾಸಕರನ್ನು ರಕ್ಷಿಸಲು ಮುಂದಾದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸ, ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿರುವುದಕ್ಕೆ ಒಕ್ಕಲಿಗರ ಸಮುದಾಯ ತಿರುಗಿ ಬಿದ್ದಿದೆ. ರಾಜಕೀಯ ದ್ವೇಷಕ್ಕಾಗಿ ಡಿ.ಕೆ.ಶಿವಕುಮಾರ್ ಅವರನ್ನು ಹತ್ತಿಕ್ಕುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಅವರ ರಕ್ಷಣೆಗೆ ನಮ್ಮ ಸಮುದಾಯದವರೆಲ್ಲರೂ ಮುಂದಾಗಬೇಕೆಂದು ಒಕ್ಕಲಿಗರ ಸಂಘ ಕರೆ ನೀಡಿದೆ.
ಡಿ.ಕೆ.ಶಿವಕುಮಾರ್ ಅವರು ನಮ್ಮ ಸಮುದಾಯದ ಪ್ರಬಲ ಮುಖಂಡ. ಅವರ ನಾಯಕತ್ವವನ್ನು ಕುಗ್ಗಿಸುವ ಕೆಲಸವನ್ನು ಐಟಿ ದಾಳಿ ಮೂಲಕ ಮಾಡಲಾಗಿದೆ. ಇದು ಪೂರ್ವ ನಿಯೋಜಿತ ಕೃತ್ಯ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಸಮುದಾಯದ ಮುಖಂಡರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿ ನಮ್ಮ ನಾಯಕನಿಗೆ ಆಗಿರುವ ಅನ್ಯಾಯದ ಬಗ್ಗೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ನಾವು ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ. ನಮ್ಮ ಸಮುದಾಯದ ನಾಯಕರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸಿಕೊಳ್ಳದೆ ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಸಮುದಾಯದಲ್ಲಿ ಪ್ರಭಾವಿ ಸ್ಥಾನ ಹೊಂದಿದ್ದಾರೆ. ತಾವು ನಡೆಸಿಕೊಂಡು ಬರುತ್ತಿರುವ ವಹಿವಾಟುಗಳಲ್ಲೂ ವಿವಿಧ ಪಕ್ಷಗಳವರೊಂದಿಗೆ ಒಡನಾಟವಿದೆ. ಕಾಂಗ್ರೆಸ್ ಅಷ್ಟೇ ಅಲ್ಲದೆ ಜೆಡಿಎಸ್, ಬಿಜೆಪಿ ಪಕ್ಷದ ಮುಖಂಡರ ಜತೆ ಸ್ನೇಹ ಇದೆ.
ಈ ಸಂದರ್ಭದಲ್ಲಿ ಐಟಿ ದಾಳಿ ನಡೆದಿರುವುದಕ್ಕೆ ಒಕ್ಕಲಿಗ ಸಮುದಾಯವಷ್ಟೇ ಅಲ್ಲ, ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ದ್ವೇಷಕ್ಕೆ ಈ ದಾಳಿ ನಡೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಹಲವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಭವಿಷ್ಯದ ಭರವಸೆಯ ನಾಯಕನಾಗಿದ್ದ ಡಿ.ಕೆ.ಶಿವಕುಮಾರ್ ಅವರ ಮೇಲೆ ಇಂತಹ ಸಂದರ್ಭದಲ್ಲಿ ಐಟಿ ದಾಳಿ ನಡೆಯಬಾರದಿತ್ತು ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin