ಬಿಜೆಪಿ ಐಟಿ ಅಸ್ತ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನಾಸ್ತ್ರ

ಈ ಸುದ್ದಿಯನ್ನು ಶೇರ್ ಮಾಡಿ

BJP-Vs-Congress

ಬೆಂಗಳೂರು, ಆ.3- ಬಿಜೆಪಿ ಐಟಿ ಅಸ್ತ್ರಕ್ಕೆ ಪ್ರತ್ಯಸ್ತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷ ಡಿ.ಕೆ.ಶಿವಕುಮಾರ್ ಅವರ ಕಚೇರಿ, ನಿವಾಸಗಳ ಮೇಲೆ ನಡೆದಿರುವ ಐಟಿ ದಾಳಿ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಿದೆ. ಈ ಸಂಬಂಧ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್, ಆಪ್ತರು ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದಿರುವ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಬೇಕು. ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಅದೇ ರೀತಿ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಸೇಡಿನ ರಾಜಕಾರಣದ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ, ಕಾಂಗ್ರೆಸ್‍ನ ಪ್ರಭಾವಿ ನಾಯಕರನ್ನು ಐಟಿ ದಾಳಿ ಮೂಲಕ ಹತ್ತಿಕ್ಕುವ ಪ್ರಯತ್ನವನ್ನು ಮಾಡುತ್ತಿದೆ. ಇದಕ್ಕೆ ಎದೆಗುಂದದೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರೆ.  ಕೇಂದ್ರ ಸರ್ಕಾರದ ಮಲತಾಯಿ ಧೋರಣೆ, ಸರ್ವಾಧಿಕಾರಿ ಧೋರಣೆ ಮುಂತಾದ ವಿಷಯಗಳ ಬಗ್ಗೆ ಹೋರಾಟದ ಮೂಲಕ ಉತ್ತರ ನೀಡಬೇಕೆಂದು ಹೇಳಿದ್ದಾರೆ.

ಐಟಿ ದಾಳಿ ಬಗ್ಗೆ ಗಂಭೀರ ಚರ್ಚೆ ನಡೆಸಿದ ಅವರು, ಇದೇ ರೀತಿ ಐಟಿ ದಾಳಿಯನ್ನು ನಮ್ಮ ಹಲವು ಶಾಸಕರು, ಸಚಿವರ ಮೇಲೆ ನಡೆಸುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ಮಾಡುವ ಪ್ರಯತ್ನವನ್ನು ಕೇಂದ್ರದ ಎನ್‍ಡಿಎ ಸರ್ಕಾರ ಮಾಡುತ್ತಿದೆ. ಎಚ್ಚರದಿಂದ ಇರಬೇಕು ಎಂದು ಸೂಚಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin