ಸಚಿವ ಡಿ.ಕೆ.ಶಿ ಕಚೇರಿ,ಮನೆಗಳ ಮೇಲೆ ಇಂದೂ ಮುಂದುವರೆದ ಐಟಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ಬೆಂಗಳೂರು, ಆ.3- ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಕಚೇರಿ, ನಿವಾಸಗಳ ಮೇಲೆ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಇಂದು ಕೂಡ ಮುಂದುವರಿದಿದೆ. ಸದಾಶಿವನಗರದಲ್ಲಿರುವ ಅವರ ನಿವಾಸ, ಕನಕಪುರ, ಕೆಂಗೇರಿ, ರಾಮನಗರ, ಮೈಸೂರು, ಯಲಹಂಕ ಸೇರಿದಂತೆ 39 ಕಡೆ ನಿನ್ನೆ ಏಕಕಾಲದಲ್ಲಿ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಇಂದು ಇನ್ನೂ ಅನೇಕ ಕಡೆ ದಾಳಿ ಮುಂದುವರಿಸಿದ್ದಾರೆ. ದಾಳಿ ವೇಳೆ ಮಹತ್ವದ ದಾಖಲೆಗಳು, ಅಪಾರ ಪ್ರಮಾಣದ ಹಣ, ಚಿನ್ನಾಭರಣ ಸಿಕ್ಕಿದ್ದು, ಅವುಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಸದಾಶಿವನಗರದಲ್ಲಿ ನಿನ್ನೆ ತಡರಾತ್ರಿವರೆಗೂ ದಾಳಿ ಮುಂದುವರಿಸಿದ್ದ ಅಧಿಕಾರಿಗಳು ಅಲ್ಲೇ ವಾಸ್ತವ್ಯ ಹೂಡಿ ವಿಶ್ರಾಂತಿ ಪಡೆದು ಬೆಳಗ್ಗೆ 7 ಗಂಟೆಯಿಂದಲೇ ಮತ್ತೆ ದಾಳಿ ಆರಂಭಿಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

f5efbcfd-581e-432a-a1b0-3c12846e9ca7

ಭಾರೀ ಪ್ರಮಾಣದ ಹಣ ದೊರೆತಿರುವ ಬಗ್ಗೆ ಐಟಿ ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ. ಈ ನಡುವೆ ಐದು ಲಾಕರ್‍ಗಳಿವೆ ಎನ್ನಲಾಗಿದ್ದು, ಎರಡು ಲಾಕರ್‍ಗಳನ್ನು ಓಪನ್ ಮಾಡಲಾಗಿದ್ದು, ಉಳಿದ ಮೂರು ಲಾಕರ್‍ಗಳನ್ನು ಓಪನ್ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೀ ಸ್ಪೆಷಲಿಸ್ಟ್‍ಗಳನ್ನು ಕರೆಸಿ ಲಾಕರ್‍ಗಳನ್ನು ಓಪನ್ ಮಾಡಲು ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮುಂಬೈನಲ್ಲಿ ಒಂದು ಫ್ಲಾಟ್ ಇರುವುದು ಕೂಡ ಪತ್ತೆಯಾಗಿದ್ದು, ದೆಹಲಿಯ ಸಪ್ತರ್‍ಜಂಗ್ ನಿವಾಸದಲ್ಲಿ ದಾಳಿ ವೇಳೆ ಅಪಾರ ಪ್ರಮಾಣದ ಹಣ ದೊರೆತಿದೆ ಎನ್ನಲಾಗಿದ್ದು, ಅಲ್ಲಿಗೂ ಶಿವಕುಮಾರ್ ಅವರನ್ನು ಕರೆದೊಯ್ಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.300ಕ್ಕೂ ಅಧಿಕ ಆದಾಯ ತೆರಿಗೆ ಅಧಿಕಾರಿಗಳ ತಂಡ ಏಕಕಾಲದಲ್ಲಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ರವಿ, ಅಲ್ಲದೆ ಅವರ ಆಪ್ತರು, ಜ್ಯೋತಿಷಿಗಳ ಮನೆ ಮೇಲೂ ನಡೆದಿರುವ ದಾಳಿ ಇಂದು ಕೂಡ ಮುಂದುವರಿದಿದೆ.

0438efc0-16bf-4855-a147-84435c5096fe

ಡಿ.ಕೆ.ಶಿವಕುಮಾರ್ ಅವರ ಮಕ್ಕಳು ಶಾಲೆಗೆ ತೆರಳಲು ಅನುಮತಿ ನೀಡಲಾಗಿದ್ದು, ಉಳಿದಂತೆ ಒಳಗಿದ್ದವರು ಯಾರನ್ನೂ ಹೊರಗೆ ಬಿಟ್ಟಿಲ್ಲ. ಅಪಾರ ಪ್ರಮಾಣದ ಹಣ, ಚಿನ್ನಾಭರಣ ಪತ್ತೆಯಾಗಿರುವುದರಿಂದ ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಾರಿ ನಿರ್ದೇಶನಾಲಯಕ್ಕೆ ವಹಿಸುವ ಸಾಧ್ಯತೆ ಇದೆ. ಸದ್ಯ ಆದಾಯ ತೆರಿಗೆ ಅಧಿಕಾರಿಗಳ ವಶದಲ್ಲಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ವಶಕ್ಕೆ ನೀಡುವ ಸಾಧ್ಯತೆ ಇದೆ.   ಕೇಂದ್ರ ಸರ್ಕಾರ ರಾಜಕೀಯ ವೈಷಮ್ಯದಿಂದ ಈ ದಾಳಿ ನಡೆಸಿದೆ ಎಂದು ಆರೋಪಿಸಿ ನಿನ್ನೆ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಇಂದು ಕೂಡ ಪ್ರತಿಭಟನೆ ಮುಂದುವರಿಸಿದ್ದಾರೆ. ಡಿ.ಕೆ.ಶಿವಕುಮಾರ್ ನಿವಾಸದೆದುರು ಕಾಂಗ್ರೆಸ್ ಕಾರ್ಯಕರ್ತರು ನಿನ್ನೆಯಿಂದ ಜಮಾಯಿಸಿದ್ದು, ಐಟಿ ದಾಳಿ ವಿರೋಧಿಸಿ ಘೋಷಣೆಗಳನ್ನು ಕೂಗಿದರು.

211f5511-c3a9-4997-be72-eb65f7f9621e

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಾಧ್ಯತೆ:

ಜಾರಿ ನಿರ್ದೇಶನಾಲಯದಿಂದ ಬಂಧನವಾಗುವ ಸಾಧ್ಯತೆ ಇರುವುದರಿಂದ ಡಿ.ಕೆ.ಶಿ ವಕೀಲರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಕಳೆದ 2008ರಲ್ಲಿ 75 ಕೋಟಿ ರೂ.ಗಳ ಆಸ್ತಿ ಘೋಷಣೆ ಮಾಡಿಕೊಂಡಿದ್ದ ಡಿ.ಕೆ.ಶಿ. 2013ರಲ್ಲಿ 250 ಕೋಟಿ ರೂ.ಗಳ ಆಸ್ತಿ ಘೋಷಣೆ ಮಾಡಿಕೊಂಡು ಆಗರ್ಭ ಶ್ರೀಮಂತರ ಪಟ್ಟಿಯಲ್ಲಿದ್ದರು. ಘೋಷಿತ ಆಸ್ತಿಯೇ ಈ ಪ್ರಮಾಣದಲ್ಲಿ ಇದೆ. ಹಾಗಾಗಿ ಐಟಿ ವಶಪಡಿಸಿಕೊಂಡಿರುವ ದಾಖಲೆಗಳಿಗೆ ಸಮಜಾಯಿಷಿ ನೀಡಿ ಈ ಪ್ರಕರಣದಿಂದ ಹೊರಬರಲಿದ್ದಾರೆ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin