ಸದ್ಯ ಕಾಂಗ್ರೆಸ್‍ನಲ್ಲಿ ಡಿ.ಕೆ.ಶಿವಕುಮಾರ್ ಹೀರೋ..!

DK-Shivakumar--01

ಬೆಂಗಳೂರು, ಆ.3- ಸದ್ಯದ ಪರಿಸ್ಥಿತಿಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೀರೋ… ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂಡು ಪಕ್ಷದ ಕೆಲಸಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಗುಜರಾತ್ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಹೆಚ್ಚಾದ ಕಾರಣ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆತಂದು ತಮ್ಮ ಪಕ್ಷದ ಅಭ್ಯರ್ಥಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಅವರನ್ನು ಗೆಲ್ಲಿಸಲು ಪ್ರಯತ್ನಿಸಿ ಈಗ ಐಟಿ ದಾಳಿಗೆ ತುತ್ತಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಅನುಕಂಪದ ಅಲೆ ಹೆಚ್ಚಾಗಿದೆ.

ಸ್ವತಃ ಮುಖ್ಯಮಂತ್ರಿಗಳ ಆಪ್ತರೇ ಗುಜರಾತ್ ಶಾಸಕರನ್ನು ಕಾಂಗ್ರೆಸ್‍ಗೆ ಕರೆತಂದು ರಕ್ಷಣೆ ಕೊಡುವ ಪ್ರಯತ್ನ ಮಾಡದೆ ಹಿಂದೇಟು ಹಾಕಿದ್ದರು. ಪ್ರಧಾನಿ ಮೋದಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ವಿರೋಧ ಕಟ್ಟಿಕೊಳ್ಳುವುದು ಏಕೆ, ವಿವಾದಗಳನ್ನೇಕೆ ಮೈಮೇಲೆ ಹಾಕಿಕೊಳ್ಳಬೇಕು ಎಂದು ಅನೇಕ ಹಿರಿಯ ಸಚಿವರೇ ಈ ಕಾರ್ಯಾಚರಣೆಯಿಂದ ಹಿಂದೆ ಸರಿದಿದ್ದರು. ಆದರೆ, ಡಿ.ಕೆ.ಶಿವಕುಮಾರ್ ಅವರು ತಾವು ಮುಂದೆ ನಿಂತು ಶಾಸಕರಿಗೆ ರಕ್ಷಣೆ ಕೊಡುವುದು ಹೈಕಮಾಂಡ್ ವರಿಷ್ಠ ಅಹಮ್ಮದ್ ಪಟೇಲ್ ಅವರನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯನ್ನು ಹೊತ್ತಿದ್ದರು.

ಈ ಕಾರಣಕ್ಕೆ ಅವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಸದ್ಯ ಸಂಕಷ್ಟಕ್ಕೆ ಸಿಲುಕಿದ್ದರಾದರೂ ಪಕ್ಷದಲ್ಲೀಗ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ನಿತೀಶ್‍ಕುಮಾರ್, ಎಸ್.ಎಂ.ಕೃಷ್ಣರಂತಹ ನಾಯಕರೇ ಮೋದಿ, ಅಮಿತ್ ಷಾ ಅವರನ್ನು ಎದುರು ಹಾಕಿಕೊಳ್ಳದೆ ಬಿಜೆಪಿ ಪಾಳಯಕ್ಕೆ ಸೇರಿದರು. ಆದರೆ, ಖಡಕ್ ನಾಯಕ, ಪಕ್ಷದ ನಿಷ್ಠಾವಂತ ಡಿ.ಕೆ.ಶಿವಕುಮಾರ್ ಮಾತ್ರ ಗುಜರಾತ್ ರಾಜ್ಯಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂದು ಛಲ ತೊಟ್ಟು ಅವರ ವಿರುದ್ಧ ಸಡ್ಡು ಹೊಡೆದಿದ್ದಕ್ಕೆ ಈಗ ಐಟಿ ದಾಳಿಯಾಗಿದೆ. ರಾಜ್ಯದಲ್ಲೆಲ್ಲ ಇದೇ ಸುದ್ದಿ.

ರಾಜಕೀಯ ಕಾರಣಕ್ಕಾಗಿ ಬಿಜೆಪಿ ಇಂತಹ ದ್ವೇಷ ರಾಜಕಾರಣ ಮಾಡಬಾರದಿತ್ತು. ಅಖಾಡದಲ್ಲಿ ಚುನಾವಣೆ ಎದುರಿಸಬೇಕು. ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ ಅವರಿಗೆ ಭಯ ಉಂಟು ಮಾಡಿ ಚುನಾವಣೆ ಗೆಲ್ಲುವುದು ಯಾವ ಮಹಾ ಘನಕಾರ್ಯವಾಗಿದೆ. ಹೀಗಾಗಿ ತಮ್ಮ ಪಕ್ಷ ಹಾಗೂ ಶಾಸಕರ ರಕ್ಷಣೆಗೆ ಮುಂದಾಗಿದ್ದು, ಡಿ.ಕೆ.ಶಿವಕುಮಾರ್ ಅವರು ಸದ್ಯ ಈಗ ಕಾಂಗ್ರೆಸ್‍ನಲ್ಲಿ ವರ್ಚಸ್ಸಿನ ನಾಯಕ. ಅನುಕಂಪದ ಅಲೆ ಅವರ ಪರವಾಗಿದೆ.
ಐಟಿ ದಾಳಿಯಲ್ಲಿ ಅಷ್ಟು ಸಿಕ್ಕಿತು, ಇಷ್ಟು ಸಿಕ್ಕಿತು, ಅಷ್ಟು ಪ್ರಮಾಣದ ಹಣ, ಇಷ್ಟು ಪ್ರಮಾಣದ ಆಸ್ತಿ, ಅಂತೆ-ಕಂತೆಗಳ ಬೊಂತೆ ನಡೆಯುತ್ತಿದೆ. ಅಕಸ್ಮಾತ್ ಇವರನ್ನು ಐಟಿ ಅಧಿಕಾರಿಗಳು ವಿಷ ವರ್ತುಲದಲ್ಲಿ ಸಿಲುಕಿಸಿ ಬಂಧಿಸಿದರೂ ಕೂಡ ಡಿ.ಕೆ.ಶಿವಕುಮಾರ್ ಅವರು ಮತ್ತಷ್ಟು ಪ್ರಭಾವಿ ನಾಯಕರಾಗಿ ಹೊರಹೊಮ್ಮುವುದರಲ್ಲಿ ಆಶ್ಚರ್ಯವಿಲ್ಲ.

ಶಾಸಕರ ರೆಸಾರ್ಟ್ ರಾಜಕೀಯ ಹೊಸದೇನಲ್ಲ. ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್.ಟಿ.ರಾಮರಾವ್ ಅವರ ಕಾಲದಿಂದಲೂ ಇಂತಹ ಬೆಳವಣಿಗೆಗಳು ನಡೆದಿವೆ. ಆ ಸಂದರ್ಭದಲ್ಲಿ ರಘುಪತಿಯವರ ನೇತೃತ್ವದಲ್ಲಿ ಶಾಸಕರನ್ನು ಕರೆತಂದು ಅಶೋಕ ಹೊಟೇಲ್‍ನಲ್ಲಿ ಇಡಲಾಗಿತ್ತು.
ಇದಲ್ಲದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಭಿನ್ನಮತ ಉಂಟಾಗಿ ಭಿನ್ನಮತೀಯ ಬಿಜೆಪಿ ಶಾಸಕರು ಅತಿವೃಷ್ಟಿಯಿದ್ದ ಸಂದರ್ಭದಲ್ಲೂ ಹೈದರಾಬಾದ್ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದರು.

ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಸಂದರ್ಭದಲ್ಲೂ ಜೆಡಿಎಸ್ ಶಾಸಕರನ್ನು ಗೋವಾ ರೆಸಾರ್ಟ್‍ನಲ್ಲಿ ಇಡಲಾಗಿತ್ತು. ರೆಸಾರ್ಟ್ ರಾಜಕಾರಣ ಹೊಸದೇನಲ್ಲ. ಆದರೆ, ಬಿಜೆಪಿ ವರಿಷ್ಠರು ಜಿದ್ದಿಗೆ ಬಿದ್ದವರಂತೆ ಡಿ.ಕೆ.ಶಿವಕುಮಾರ್ ಅವರನ್ನು ಐಟಿ ದಾಳಿ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin