ಐಟಿ ದಾಳಿ ಹಿಂದೆ ರಾಜಕೀಯ ಸೇಡು : ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

ಈ ಸುದ್ದಿಯನ್ನು ಶೇರ್ ಮಾಡಿ

Siddaramiaha--01

ಬೆಂಗಳೂರು, ಆ.4- ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದು ಸಂಪೂರ್ಣ ರಾಜಕೀಯ ಪ್ರೇರಿತ. ದಾಳಿ ಭದ್ರತೆಗೆ ಸಿಆರ್‍ಪಿಎಫ್ ಯೋಧರನ್ನು ಕರೆತರುವ ಮೂಲಕ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರ್ನಾಲ್ಕು ದಿನಗಳಿಂದ ಮನೆಯಿಂದ ಹೊರಬರದೆ ಮೌನವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮನೆಯಿಂದ ಹೊರಬಂದು ಸುದ್ದಿಗಾರರೊಂದಿಗೆ ಇಂಗ್ಲಿಷ್‍ನಲ್ಲೇ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು.

ಆದಾಯ ತೆರಿಗೆ ಇಲಾಖೆ ದಾಳಿ ಮಾಡುವುದಕ್ಕೆ, ಯಾವ ಮನೆಯನ್ನಾದರೂ ಶೋಧ ಮಾಡುವುದಕ್ಕೆ ತನ್ನ ವಿರೋಧವಿಲ್ಲ. ಅದರ ಹಿಂದಿನ ಉದ್ದೇಶ ಸರಿಯಾಗಿರಬೇಕು. ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ಮಾಡಲು ಆಯ್ಕೆ ಮಾಡಿಕೊಂಡ ಸಮಯ ಮತ್ತು ಉದ್ದೇಶ ರಾಜಕೀಯ ಪ್ರೇರಿತವಾಗಿದೆ ಎಂದರು. ಕೇಂದ್ರ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಉದ್ದೇಶ ಸರಿಯಿಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುಜರಾತ್‍ನ ಕಾಂಗ್ರೆಸ್ ಶಾಸಕರು ತಂಗಿರುವ ಈಗಲ್‍ಟನ್ ರೆಸಾರ್ಟ್ ಮೇಲೆ ದಾಳಿ ಮಾಡುವ ಅಗತ್ಯವಿರಲಿಲ್ಲ. ಆದರೂ ಅಲ್ಲಿಗೆ ಅಧಿಕಾರಿಗಳು ಹೋಗಿದ್ದಾರೆ.

ಗುಜರಾತ್‍ನ ಕಾಂಗ್ರೆಸ್ ಶಾಸಕರೇ ಹೇಳಿಕೆ ನೀಡಿರುವಂತೆ ಆದಾಯ ತೆರಿಗೆ ಅಧಿಕಾರಿಗಳು ರಾಜ್ಯಸಭೆ ಚುನಾವಣೆಯಲ್ಲಿ ಭಾಗವಹಿಸದಿರುವಂತೆ ಹಣದ ಆಮಿಷ ಒಡ್ಡಿದ್ದಾರೆ. ಇದರಿಂದಾಗಿ ದಾಳಿಯ ಉದ್ದೇಶ ಕೇವಲ ರಾಜಕೀಯ ಪ್ರೇರಿತ ಎಂದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ಹೇಳಿದರು.  ಈವರೆಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುವ ವೇಳೆ ಸ್ಥಳೀಯ ಪೊಲೀಸರ ನೆರವು ಪಡೆಯುತ್ತಿದ್ದರು. ಇದೇ ಮೊದಲ ಬಾರಿಗೆ ಸಿಆರ್‍ಪಿಎಫ್ ಯೋಧರನ್ನು ಬಳಸಿಕೊಳ್ಳಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನೇ ಪ್ರಶ್ನೆ ಮಾಡಿದಂತಾಗಿದೆ. ಜತೆಗೆ ಶಸ್ತ್ರ ಸಜ್ಜಿತ ಸಿಆರ್‍ಪಿಎಫ್ ಯೋಧರನ್ನು ಈಗಲ್‍ಟನ್ ರೆಸಾರ್ಟ್, ಡಿ.ಕೆ.ಶಿವಕುಮಾರ್ ಅವರ ಮನೆ-ಕಚೇರಿ ಹಾಗೂ ಇತರೆಡೆಗೆ ಕರೆದುಕೊಂಡು ಹೋಗಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕಾಗಿ ಇಂತಹ ನಡವಳಿಕೆ ಅನುಸರಿಸಬಾರದು ಎಂದರು. ಡಿ.ಕೆ.ಶಿವಕುಮಾರ್ ಅವರ ತಾಯಿ ನನ್ನ ಮಗನ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.  ಆದಾಯ ತೆರಿಗೆ ದಾಳಿಯನ್ನು ಕೇಂದ್ರ ಸಚಿವ ಅನಂತ್‍ಕುಮಾರ್ ಹಾಗೂ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿರುವುದು ಮತ್ತು ಭ್ರಷ್ಟಾಚಾರ ಮಟ್ಟ ಹಾಕಲು ದಾಳಿ ನಡೆಸಲಾಗುತ್ತಿದೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸ್ವತಃ ಅನಂತ್‍ಕುಮಾರ್ ಅವರೇ ಭ್ರಷ್ಟಾಚಾರ ಹಗರಣದ ಆರೋಪಿಯಾಗಿದ್ದಾರೆ. ಅವರ ಮೇಲೆ ಈಗಲೂ ತನಿಖೆ ನಡೆಯುತ್ತಿದೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೇಲೂ ಭ್ರಷ್ಟಾಚಾರದ ಆರೋಪಗಳಿವೆ. ಆದರೆ, ಅವರು ಕಾಂಗ್ರೆಸ್ ನಾಯಕರು, ಸಚಿವರ ಮೇಲೆ ಆರೊಪ ಮಾಡುವುದು ಅಸಂಬದ್ಧ ಎಂದು ತರಾಟೆಗೆ ತೆಗೆದುಕೊಂಡರು. ರಾಜ್ಯದ ಇತರೆ ಸಚಿವರ ಮೇಲೂ ಆದಾಯ ತೆರಿಗೆ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಇದೊಂದು ದುರುದ್ದೇಶಪೂರಿತ ದಾಳಿ. ಇದಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವೇ ಇಲ್ಲ. ಸಚಿವರು ಬಯಸಿದರೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ ಹೇಳಿದರು.

ದಾಳಿಗೆ ಒಳಗಾಗಿರುವ ಡಿ.ಕೆ.ಶಿವಕುಮಾರ್ ನಿಷ್ಕಳಂಕಿತರಾಗಿ ಹೊರ ಹೊಮ್ಮಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಕಾರಣಕ್ಕೆ ದಾಳಿ ನಡೆದಿದೆ, ಏನೆಲ್ಲ ಶೋಧ ಮಾಡಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin