ನಮ್ಮ ವ್ಯವಹಾರಗಳು ಪಾರದರ್ಶಕ ಮತ್ತು ಕಾನೂನು ಬದ್ಧವಾಗಿವೆ : ಡಿ.ಕೆ.ಸುರೇಶ್

ಈ ಸುದ್ದಿಯನ್ನು ಶೇರ್ ಮಾಡಿ

DK-Suresh--01

ಬೆಂಗಳೂರು, ಆ.4- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆಗೆ ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ನಾವು, ಡಿ.ಕೆ.ಶಿವಕುಮಾರ್ ಕುಟುಂಬ ಅತ್ಯಂತ ಪಾರದರ್ಶಕವಾಗಿದ್ದೇವೆ. ನಮ್ಮೆಲ್ಲ ವ್ಯವಹಾರಗಳು ಕಾನೂನು ಬದ್ಧವಾಗಿವೆ. ಅಧಿಕಾರಿಗಳು ಕೇಳಿದ ಎಲ್ಲ ದಾಖಲಾತಿಗಳನ್ನು ನಾವು ಒದಗಿಸುತ್ತಿದ್ದೇವೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಹೇಳಿದರು. ಸದಾಶಿವನಗರದಲ್ಲಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಖಲೆಗಳ ಪರಿಶೀಲನೆ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಅಧಿಕಾರಿಗಳ ಮಾತಿನ ವೈಖರಿ ಗಮನಿಸಿದರೆ ಇವತ್ತು ಪರಿಶೀಲನೆ ಮುಗಿಯಬಹುದು ಎಂದೆನಿಸುತ್ತದೆ ಎಂದು ಅವರು ಹೇಳಿದರು.

ಅಣ್ಣನ ಭೇಟಿಗೆ ಐಟಿ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಅವರನ್ನು ನೋಡಲು ಕೂಡ ಅವಕಾಶ ಕೊಡಲಿಲ್ಲ. ಇವತ್ತು ವರಮಹಾಲಕ್ಷ್ಮಿ ಹಬ್ಬ. ಸಹೋದರನ ಭೇಟಿಗೆ ಅವಕಾಶ ನೀಡಿ ಎಂದು ಮಾಡಿದ ಮನವಿಗೆ ಅಧಿಕಾರಿಗಳು ಒಪ್ಪಲಿಲ್ಲ ಎಂದರು. ಜತೆಗೆ ಗುಜರಾತ್ ಕಾಂಗ್ರೆಸ್ ಶಾಸಕರು ಕರ್ನಾಟಕದಲ್ಲಿ ವಾಸ್ತವ್ಯ ಹೂಡಿರುವ ಹಿನ್ನೆಲೆಯಲ್ಲಿ ನಾವು ಮಾತುಕತೆ ಮಾಡಿ ಕೆಲವು ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟೆ. ಹೀಗಾಗಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಅನುಮತಿ ಪಡೆದು ಮಧ್ಯಾಹ್ನದ ನಂತರ ಡಿ.ಕೆ.ಶಿವಕುಮಾರ್ ಜತೆ ಮಾತುಕತೆ ನಡೆಸಲು ಅವಕಾಶ ಕೊಡುವ ಭರವಸೆ ನೀಡುವುದಾಗಿ ಹೇಳಿದ್ದಾರೆ.

ಈಗಲ್‍ಟನ್ ರೆಸಾರ್ಟ್‍ನಲ್ಲಿರುವ ಗುಜರಾತ್ ಶಾಸಕರು ಒಗ್ಗಟ್ಟಾಗಿದ್ದಾರೆ, ಸಂತೋಷವಾಗಿದ್ದಾರೆ. ಗುಜರಾತ್ ರಾಜ್ಯಸಭೆ ಚುನಾವಣೆ ಹಿಂದಿನ ದಿನದವರೆಗೆ ಅಲ್ಲೇ ಇರುತ್ತಾರೆ. ಕೇಂದ್ರ ಸರ್ಕಾರದ ಈ ಎಲ್ಲ ಷಡ್ಯಂತ್ರಗಳನ್ನೂ ನಾವು ಎದುರಿಸುತ್ತೇವೆ. ಗುಜರಾತ್ ಶಾಸಕರು ವಾಪಸ್ ಹೋಗಲು ಬೇಡಿಕೆ ಇಟ್ಟಿಲ್ಲ. ಕೆಲವರಿಗೆ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು. ಈಗ ಎಲ್ಲರೂ ಚೆನ್ನಾಗಿದ್ದಾರೆ ಎಂದು ಹೇಳಿದರು.

ಕೆಲವು ಮಾಧ್ಯಮಗಳಲ್ಲಿ ಊಹಾಪೋಹ ವರದಿಗಳು ಪ್ರಸಾರವಾಗುತ್ತವೆ. ಅಂತಹ ಮಾಧ್ಯಮಗಳ ಮೇಲೆ ಮೊಕದ್ದಮೆ ದಾಖಲಿಸುತ್ತೇವೆ. ನಮ್ಮ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿವೆ. ಉದ್ದೇಶಪೂರ್ವಕವಾಗಿ ದಾಳಿ ನಡೆದಿರುವುದರಿಂದ ಬೇಕಂತಲೇ ಪರಿಶೀಲನೆ ವಿಳಂಬ ಮಾಡಲಾಗುತ್ತಿದೆ ಎಂದು ಐಟಿ ಅಧಿಕಾರಿಗಳ ವಿರುದ್ಧ ಡಿ.ಕೆ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin