ನಾಳೆ ಉಪರಾಷ್ಟ್ರಪತಿ ಚುನಾವಣೆ, ವೆಂಕಯ್ಯ ಗೆಲುವು ಖಚಿತ

Venkaiah--Naidu--01

ನವದೆಹಲಿ, ಆ.4-ಉಪ ರಾಷ್ಟ್ರಪತಿ ಚುನಾವಣೆಗೆ ನಾಳೆ ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿ ಎಂ.ವೆಂಕಯ್ಯನಾಯ್ಡು ಆಯ್ಕೆ ಬಹುತೇಕ ಖಚಿತವಾಗಿದೆ. ಮಹಾತ್ಮಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದಾರೆ. ಸಂಸತ್ ಭವನದಲ್ಲಿ ನಾಳೆ (ಶನಿವಾರ) ಬೆಳಗ್ಗೆ 10 ಗಂಟೆಯಿಂದ ಉಪ ರಾಷ್ಟ್ರಪತಿ ಆಯ್ಕೆಗೆ ಮತದಾನ ನಡೆಯಲಿದ್ದು, ಸಂಜೆಯೇ ಫಲಿತಾಂಶ ಲಭ್ಯವಾಗಲಿದೆ. ವೆಂಕಯ್ಯ ಮತ್ತು ಗಾಂಧಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೂ ಬಿಜೆಪಿ ಅಭ್ಯರ್ಥಿ ನಾಯ್ಡು ಗೆಲುವು ಸಾಧಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಉಪ ರಾಷ್ಟ್ರಪತಿ ಹುದ್ದೆಗೆ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ಮಾತ್ರ ಮತದಾನ ಮಾಡಲು ಅವಕಾಶವಿದೆ. ನಾಳೆಯ ಚುನಾವಣೆಯಲ್ಲಿ 790 ಸಂಸದರು ತಮ್ಮ ಹಕ್ಕುಗಳನ್ನು ಚಲಾಯಿಸಲಿದ್ದಾರೆ. ಈಗಾಗಲೇ 484 ಸದಸ್ಯರು ನಾಯ್ಡು ಪರವಾಗಿ ಬೆಂಬಲ ಘೋಘಿಸಿದ್ದಾರೆ. ಹೀಗಾಗಿ ಉಪ ರಾಷ್ಟ್ರಪತಿ ಚುನಾವಣೆ ನಾಮ್‍ಕೇವಾಸ್ತೆ ಎಂಬಂತಾಗಿದೆ.

ಎನ್‍ಡಿಎ ಲೋಕಸಭೆಯಲ್ಲಿ 337 ಮತ್ತು ರಾಜ್ಯಸಭೆಯಲ್ಲಿ 80 ಸದಸ್ಯರನ್ನು ಒಳಗೊಂಡಿದೆ. ಎನ್‍ಡಿಎಗೆ ಎಐಎಡಿಎಂಕೆ, ಟಿಆರ್‍ಎಸ್. ವೈಎಸ್‍ಆರ್-ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಈ ಪಕ್ಷಗಳು ಲೋಕಸಭೆಯಲ್ಲಿ 50 ಮತ್ತು ರಾಜ್ಯಸಭೆಯಲ್ಲಿ 17 ಸ್ಥಾನಗಳನ್ನು ಹೊಂದಿವೆ. ಹಾಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಅವಧಿ ಆಗಸ್ಟ್ 10ರಂದು ಅಂತ್ಯಗೊಳ್ಳಲಿದೆ. ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗುವವರು ರಾಜ್ಯಸಭೆಯ ಸಭಾಪತಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin