ಮೂರನೇ ದಿನವೂ ಡಿಕೆಶಿಗೆ ಐಟಿ ಡ್ರಿಲ್

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ಬೆಂಗಳೂರು, ಆ.4- ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆಯುತ್ತಿರುವ ಐಟಿ ದಾಳಿ ಇಂದು ಕೂಡ ಮುಂದುವರಿದಿದ್ದು, ವಶಪಡಿಸಿಕೊಂಡಿರುವ ದಾಖಲೆಗಳ ಸಂಬಂಧ ಅಧಿಕಾರಿಗಳು ಡಿಕೆಶಿ ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಡಿಕೆಶಿ ಬೆಂಬಲಿಗರು, ಆಪ್ತರು, ಸಂಬಂಧಿಕರು ಸೇರಿದಂತೆ ಸುಮಾರು 69 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ವಿವಿಧ ದಾಖಲೆಗಳ ಸಂಬಂಧ ಡಿಕೆಶಿಯಿಂದ ಮಾಹಿತಿ ಪಡೆಯುತ್ತಿದ್ದಾರೆ.

ನಿನ್ನೆ ತಡರಾತ್ರಿವರೆಗೆ ಸದಾಶಿವನಗರದ ಅವರ ನಿವಾಸದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದ್ದಲ್ಲದೆ ಅಲ್ಲೇ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ 6 ಗಂಟೆಯಿಂದಲೇ ಪರಿಶೀಲನೆ ಮುಂದುವರಿಸಿದ್ದಾರೆ. ಮೈಸೂರಿನಲ್ಲಿರುವ ಡಿಕೆಶಿ ಅವರ ಮಾವ ತಿಮ್ಮಯ್ಯ ಅವರ ಮನೆ ಮೇಲೂ ಐಟಿ ದಾಳಿ ಮುಂದುವರಿದಿದೆ.  ದೆಹಲಿಯಲ್ಲೂ ಅವರ ಆಪ್ತ ಆಂಜನೇಯ ನಿವಾಸದ ಮೇಲೂ ನಡೆಯುತ್ತಿರುವ ದಾಳಿ ಇಂದು ಕೂಡ ಮುಂದುವರಿದಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ 48 ಗಂಟೆಗಳಿಂದ ಡಿ.ಕೆ.ಶಿವಕುಮಾರ್ ತಮ್ಮ ನಿವಾಸದಲ್ಲೇ ಇದ್ದು, ಐಟಿ ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ. ವಿವಿಧೆಡೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳು, ಬ್ಯಾಂಕ್ ಪಾಸ್‍ಬುಕ್‍ಗಳು, ವಿವಿಧ ಬ್ಯಾಂಕ್‍ಗಳಿಗೆ ಹಣ ವರ್ಗಾವಣೆಯಾಗಿರುವ ಮಾಹಿತಿಗಳು, ಆಸ್ತಿ ಮತ್ತಿತರ ದಾಖಲೆ ಪತ್ರಗಳ ಸಮೇತ ಅಧಿಕಾರಿಗಳು ಇಂದು ಸದಾಶಿವನಗರದ ಡಿಕೆಶಿ ನಿವಾಸಕ್ಕೆ ಆಗಮಿಸಿ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಡಿಕೆಶಿ ಅವರ ಆಪ್ತ ಗುರುಗಳಾದ ದ್ವಾರಕನಾಥ್ ಅವರ ನಿವಾಸದ ಮೇಲೆ ನಡೆದ ದಾಳಿ ನಿನ್ನೆ ರಾತ್ರಿ ಮುಗಿದಿದ್ದು, ಪರಿಶೀಲನೆಗಾಗಿ ದಾಖಲಾತಿಗಳನ್ನು ಐಟಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಡಿಕೆಶಿ ನಿವಾಸಕ್ಕೆ ಇಂದು ಬೆಳಗ್ಗೆ ಆಗಮಿಸಿದರು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಉದ್ಯಮಿಗಳು ಮತ್ತು ರಾಜಕಾರಣಿಗಳೂ ಹೌದು. ಎಲ್ಲ ಲೆಕ್ಕಪತ್ರಗಳು ಪಾರದರ್ಶಕವಾಗಿವೆ. ಯಾವುದೇ ಹಣವನ್ನು ಐಟಿ ಅಧಿಕಾರಿಗಳು ನಮ್ಮಿಂದ ವಶಪಡಿಸಿಕೊಂಡಿಲ್ಲ. ಐಟಿ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಅತ್ತ ದೆಹಲಿಯ ಸಪ್ತರ್‍ಜಂಗ್‍ನಲ್ಲಿರುವ ಡಿಕೆಶಿ ನಿವಾಸದ ಮೇಲೆ ಇಂದು ಕೂಡ ದಾಖಲೆಗಳನ್ನು ಪರಿಶೀಲನೆ ನಡೆಸಿ ಹಣ ವಹಿವಾಟಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಡಿಕೆಶಿ ಆಪ್ತ ಆಂಜನೇಯ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಡಿಕೆಶಿ ಆಪ್ತರು ಹಾಗೂ ಅವರೊಂದಿಗೆ ವಾಣಿಜ್ಯ ವಹಿವಾಟು ನಡೆಸುತ್ತಿದ್ದವರು, ಅವರ ಉದ್ಯಮದ ಪಾಲುದಾರರು ಎಲ್ಲರ ವಿವರಗಳನ್ನು ಐಟಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಐಟಿ ದಾಳಿ ಇನ್ನೂ ಕೂಡ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಡಿಕೆಶಿ ವಿರುದ್ಧ ವಿದೇಶಿ ಹಣ ವಿನಿಮಯದ ಬಗ್ಗೆ ಇಡಿಗೆ ದೂರು ಕೂಡ ದಾಖಲಾಗಿದೆ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಡಿಕೆಶಿ ಅವರ ಮೇಲೆ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಅವರ ಬೆಂಬಲಕ್ಕೆ ನಿಂತಿದೆ.

ಒಕ್ಕಲಿಗ ಸಮುದಾಯವು ಕೂಡ ಡಿಕೆಶಿ ಪರವಾಗಿ ನಿಂತು ಐಟಿ ದಾಳಿಯನ್ನು ಖಂಡಿಸಿದೆ. ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಣೆ ಮಾಡಲು ಮುಂದಾದ ಡಿಕೆಶಿ ಅವರನ್ನು ರಾಜಕೀಯವಾಗಿ ಅಣಿಯಲು ಐಟಿ ದಾಳಿ ತಂತ್ರ ಅನುಸರಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin