ಅಮಿತ್ ಷಾ ಕರ್ನಾಟಕಕ್ಕೆ ಬಂದಾಗ ನಾವು ಕಲ್ಲು ತೂರಿದ್ವಾ..? ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramiaha--01

ಬೆಂಗಳೂರು, ಆ.5-ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿಯವರ ಕಾರಿಗೆ ಗುಜರಾತಿನಲ್ಲಿ ಕಲ್ಲು ತೂರಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರ್ನಾಟಕಕ್ಕೆ ಬಂದಾಗ ನಾವು ಅದೇ ರೀತಿ ಕಲ್ಲು ತೂರಿದ್ದೇವಾ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ನಗರ ಪ್ರದಕ್ಷಿಣೆಗೂ ಮುನ್ನ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‍ನಲ್ಲಿ ರಾಹುಲ್‍ಗಾಂಧಿ ಅವರ ಕಾರಿಗೆ ಕಲ್ಲು ತೂರಿರುವುದು ಖಂಡನೀಯ. ರಾಜಕೀಯ ಕಾರಣಕ್ಕಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ರಾಹುಲ್‍ಗಾಂಧಿ ಗುಜರಾತ್‍ಗೆ ಬಂದಿದ್ದು ರಾಜಕೀಯ ಮಾಡಲಿಕ್ಕಾಗಿ ಅಲ್ಲ,ಪ್ರವಾಹ ಸಂತ್ರಸ್ತರ ಕಷ್ಟ-ಸುಖಗಳನ್ನು ಕೇಳಲು ಹೋಗಿದ್ದರು. ಅದಕ್ಕೆ ವಿರೋಧ ವ್ಯಕ್ತಪಡಿಸುವುದು ಎಂತಹ ಪ್ರಜಾಪ್ರಭುತ್ವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಇದೇ ರೀತಿ ಮುಂದುವರೆದರೆ ಕಾಂಗ್ರೆಸ್ ಕೈಕಟ್ಟಿ ಕೂರುವುದಿಲ್ಲ. ದೇಶಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ. ರಾಜಕೀಯವಾಗಿ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತ ದಾಳಿ. ದಾಳಿಯ ಭದ್ರತೆಗೆ ಸಿಆರ್‍ಪಿಎಫ್ ಯೋಧರನ್ನು ಬಳಸಿರುವುದು ಕಾನೂನು ಉಲ್ಲಂಘನೆಯಾಗಿದೆ. ಆದಾಯ ತೆರಿಗೆ ಕಾಯ್ದೆಯಲ್ಲಿ ಸಿಆರ್‍ಪಿಎಫ್ ಯೋಧರನ್ನು ಬಳಸುವ ಕುರಿತು ಎಲ್ಲಿಯೂ ಉಲ್ಲೇಖ ಇಲ್ಲ. ಸಿಆರ್‍ಪಿಎಫ್‍ನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಳಸಬಹುದಾಗಿದೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಎಂದಾಕ್ಷಣ ಸಿಆರ್‍ಪಿಎಫ್ ಯೋಧರಲ್ಲ, ಅಧಿಕಾರಗಳು ಎಂದರೆ ಪೊಲೀಸರಲ್ಲ ಎಂದು ಹೇಳಿದರು.

ಜೊತೆಗೆ ಸಿಆರ್‍ಪಿಎಫ್ ಬಳಸಬೇಕಾದರೆ ಸೂಕ್ತ ಸಂದರ್ಭವಿರಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಸರ್ಕಾರ ವಿಫಲವಾಗಿದ್ದರೆ ಆ ಸಂದರ್ಭದಲ್ಲಿ ಸಿಆರ್‍ಪಿಎಫ್ ಬಳಸಬಹುದು. ಅದನ್ನು ಹೊರತುಪಡಿಸಿ ಏಕಾಏಕಿ ಸಿಆರ್‍ಪಿಎಫ್ ಯೋಧರನ್ನು ಬಳಸಿರುವುದು ಅಕ್ಷಮ್ಯ. ಇದು ಸಂಪೂರ್ಣ ರಾಜಕೀಯ ಪ್ರೇರಿತ ದಾಳಿ, ಸಂವಿಧಾನ ವಿರೋಧಿ ನಡೆ. ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ, ರಾಜ್ಯಸರ್ಕಾರದ ಅಧಿಕಾರದಲ್ಲಿ ಮೂಗು ತೂರಿಸುವ ಉದ್ಧಟತನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರು ಮಾತನಾಡುವ ನೈತಿಕತೆ ಹೊಂದಿಲ್ಲ. ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ ಸೇರಿದಂತೆ ಹಲವರ ಮೇಲೆ ಭ್ರಷ್ಟಾಚಾರದ ಆರೋಪವಿದೆ.  ಈಶ್ವರಪ್ಪ ಅವರ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಿಕ್ಕಿದೆ. ಆದಾಯ ತೆರಿಗೆ ಇಲಾಖೆ ಕಾನೂನುಬದ್ಧವಾಗಿ ದಾಳಿ ಮಾಡಲು ನಮ್ಮ ಅಭ್ಯಂತರವಿಲ್ಲ. ರಾಜಕೀಯ ಪ್ರೇರಿತವಾಗಿ ಮಾಡಿದರೆ, ನಾವು ರಾಜಕೀಯವಾಗಿಯೇ ಉತ್ತರ ನೀಡಲಿದ್ದೇವೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin