ಐಟಿ ದಾಳಿಗೊಳಗಾದ ಡಿಕೆಶಿ ಮತ್ತೆ ಫೀನಿಕ್ಸ್ ನಂತೆ ಎದ್ದು ಬರುವರೇ..?

DK-Shivakumar--01

ಬೆಂಗಳೂರು, ಆ.5-ಸ್ವಲ್ಪವೂ ವಿಚಲಿತರಾಗದ ವ್ಯಕ್ತಿತ್ವ, ಅದೇ ಖದರ್. ಮಾಧ್ಯಮಗಳ ಪ್ರಶ್ನೆಗೆ ಎಂದಿನ ಶೈಲಿಯಲ್ಲೇ ಉತ್ತರ. ಎದುರಾಳಿಗಳಿಗೂ ಖಡಕ್ ಎಚ್ಚರಿಕೆ ಸಂದೇಶ ರವಾನೆ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಐಟಿ ದಾಳಿ ನಂತರ ಅವರ ವ್ಯಕ್ತಿತ್ವದಲ್ಲಿ ಸ್ವಲ್ಪವೂ ವ್ಯತ್ಯಾಸ ಕಾಣಲಿಲ್ಲ.  ಬುಧವಾರದ ನಂತರ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದ ಡಿ.ಕೆ.ಶಿವಕುಮಾರ್ ಎಳ್ಳಷ್ಟು ವಿಚಲಿತರಾಗಿರಲಿಲ್ಲ. ಎಂದಿನಂತೆ ಗಡಸು ಧ್ವನಿಯಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನಾನು ಯಾವುದೇ ತಪ್ಪು ಮಾಡಿಲ್ಲ.

ಎಲ್ಲದಕ್ಕೂ ದಾಖಲೆ ಇಟ್ಟುಕೊಂಡು ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಮತ್ತೆ ರಾಜ್ಯ ರಾಜಕಾರಣದಲ್ಲಿ ಎದ್ದು ಬರುತ್ತೇನೆಂಬ ಸದ್ದು ಮಾಡಿದ್ದಾರೆ.
76 ಗಂಟೆಗಳ ಬಳಿಕ ತಮ್ಮ ನಿವಾಸ, ಸಹೋದರ, ಸಂಬಂಧಿಕರು, ಆಪ್ತರು, ಸ್ನೇಹಿತರು ಸೇರಿದಂತೆ ಮತ್ತಿತರ ಮೇಲೆ ದಾಳಿ ನಡೆದು ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಬೇನಾಮಿ ಆಸ್ತಿ, ನಕಲಿ ಕಂಪನಿಗಳ ಸೃಷ್ಟಿ , ವಿದೇಶದಲ್ಲಿ ಬಂಡವಾಳ ಹೂಡಿಕೆ ಸೇರಿದಂತೆ ಮತ್ತಿತರ ವಸ್ತುಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಸಹಜವಾಗಿ ಇಷ್ಟು ದೊಡ್ಡ ಪ್ರಮಾಣದ ದಾಳಿ ನಡೆದಾಗ ಯಾವುದೇ ಒಬ್ಬ ವ್ಯಕ್ತಿ ಮಾನಸಿಕವಾಗಿ ಕುಗ್ಗುವುದು ಸರ್ವೆ ಸಾಮಾನ್ಯ. ಆದರೆ ಹುಟ್ಟಿನಿಂದಲೇ ಸವಾಲನ್ನು ಸ್ವೀಕರಿಸುವ ಜಾಯಮಾನ ಬೆಳೆಸಿಕೊಂಡಿರುವ ಶಿವಕುಮಾರ್ ಶನಿವಾರ ಎಲ್ಲಿಯೂ ಕೂಡ ದಾಳಿಯಿಂದ ಕಿಂಚಿತ್ತೂ ಅದಿರರಾದಂತೆ ಕಂಡುಬರಲಿಲ್ಲ.  ಬದಲಾಗಿ ಮತ್ತೆ ಫೀನಿಕ್ಸ್ ನಂತೆ ಎದ್ದು ಬರುತ್ತೇನೆ ಎಂದು ಗುಡುಗಿದ್ದರಲ್ಲಿ ನಾನಾ ಅರ್ಥಗಳು ಸಿಗುತ್ತಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ತಮ್ಮ ಮೇಲೆ ದಾಳಿ ನಡೆದ ನಂತರ ಬಹುವಾಗಿ ಖುಷಿಪಟ್ಟವರೇ ಅನೇಕರು ಎಂಬುದು ಅವರಿಗೆ ತಿಳಿದಿಲ್ಲವೆಂದೇನಿಲ್ಲ.

ರಾಜಕೀಯವಾಗಿ ತಮ್ಮನ್ನು ವ್ಯವಸ್ಥಿತವಾಗಿ ಮುಗಿಸಲು ಯಾರ್ಯಾರು ಷಡ್ಯಂತರ ರೂಪಿಸಿದರು ಎಂಬುದು ಅವರಿಗೆ ಗೊತ್ತಿತ್ತು. ಹಾಗಾಗಿಯೇ ನಾನು ರಾಜಕಾರಣಿಯಾದರೂ ಉದ್ಯಮಿಯಾಗಿದ್ದವನು. ಸಂವಿಧಾನ ಬಿಟ್ಟು ಇಲ್ಲವೇ ಕಾನೂನು ಉಲ್ಲಂಘಿಸಿ ಯಾವುದೇ ಕೆಲಸ ಮಾಡಿಲ್ಲ ಎಂದು ಅದೇ ಗತ್ತಿನಲ್ಲೇ ಹೇಳಿದ್ದು ,ಎದುರಾಳಿ ಪಾಳಿಯದಲ್ಲೂ ನಡುಕ ಹುಟ್ಟಿಸಿದೆ.  ಸದ್ಯಕ್ಕೆ ಶಿವಕುಮಾರ್ ತಮ್ಮ ಮೇಲೆ ದಾಖಲಾಗಿರುವ ಪ್ರಕರಣಗಳ ಕುರಿತಂತೆ ಕಾನೂನು ಹೋರಾಟ ನಡೆಸಬಹುದು. ಅವರಿಗೆ ಕಾನೂನಿನಲ್ಲಿ ಜಯ ಸಿಕ್ಕರೆ ಮತ್ತೆ ಹಳೇ ಶಿವಕುಮಾರ್ ಆಗಿರುವುದರಲ್ಲಿ ಸಂದೇಹವೇ ಇಲ್ಲ.

ದಾಳಿ ನಿಲ್ಲಿಸಿರುವ ಐಟಿಯವರು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ? ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪುನಃ ತನಿಖೆ ಕೈಗೊಂಡರೆ ಒಂದಿಷ್ಟು ಕಾನೂನಿನ ಇಕ್ಕಟ್ಟಿಗೆ ಸಿಲುಕಬಹುದು. ಅದನ್ನು ಹೊರತುಪಡಿಸಿದರೆ ಡಿಕೆಯನ್ನು ಕಾಂಗ್ರೆಸ್ ಆಗಲಿ, ಇಲ್ಲವೇ ಬಿಜೆಪಿಯನ್ನು ಕಟ್ಟಿ ಹಾಕುವುದು ಅಷ್ಟು ಸುಲಭವಲ್ಲ. ಮುಂದೆ ಮತ್ತ್ಯಾವ ತಿರುವು ಪಡೆಯುತ್ತದೆ ನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin