ಐಟಿ ದಾಳಿ ನಂತರ ಡಿ.ಕೆ.ಶಿವಕುಮಾರ್ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--015

ಬೆಂಗಳೂರು, ಆ.5- ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹೇಳಲು ನಾನು ತಯಾರಿದ್ದೇನೆ… ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಆದರೆ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿರವುದರಿಂದ ಈಗ ನಾನು ಐಟಿ ದಾಳಿ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ… ಜೊತೆಗೆ ನನ್ನ ಪಕ್ಷಕ್ಕೆ ಮುಜುಗರ ಉಂಟು ಮಾಡುವುದಕ್ಕೂ ನಾನು ಇಷ್ಟಪಡುವುದಿಲ್ಲ … ಯಾವತ್ತೂ ನಾನು ಕಾನೂನು ಚೌಕಟ್ಟು ಮೀರಿದವನಲ್ಲ…ಐಟಿ ಅಧಿಕಾರಿಗಳ ತಪಾಸಣೆ ಮುಗಿಸಿಕೊಂಡು ಇಂದು ಬೆಳಗ್ಗೆ ತಮ್ಮ ಸದಾಶಿವನಗರ ನಿವಾಸದಿಂದ ಹೊರಬಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾಧ್ಯಮದವರಿಗೆ ಮನವಿ ಮಾಡಿದ ಪರಿ ಇದು.

ಕಳೆದ ನಾಲ್ಕು ದಿನಗಳಿಂದ ಸಚಿವರು, ಅವರ ಸಹೋದರ, ಸಂಬಂಧಿಕರು, ಆಪ್ತರುಗಳ ಮನೆಗಳು ಮತ್ತು ಕಚೇರಿಗಳಲ್ಲಿ ನಿರಂತರವಾಗಿ ದಾಳಿ ನಡೆದರೂ ತಮ್ಮ ಎಂದಿನ ಶೈಲಿಯಲ್ಲೇ ಕಂಡ ಡಿ.ಕೆ.ಶಿವಕುಮಾರ್ ಮಾಧ್ಯಮದವರೊಡನೆ ಮಾತನಾಡಿದರು.  ನಾನು ಯಾವತ್ತೂ ಕಾನೂನು ಚೌಕಟ್ಟಿನಲ್ಲೇ ನಡೆದುಕೊಂಡು ಬಂದವನು. ನಾನೆಂದೂ ಸಂವಿಧಾನ ಮೀರಿ ನಡೆದವನಲ್ಲ. ನಾನು ಹಳ್ಳಿಯಿಂದ ಕಿವಿಯಲ್ಲಿ ಹೂವಿಟ್ಟುಕೊಂಡು ಬೆಂಗಳೂರಿಗೆ ಬಂದವನಲ್ಲ. ರಾಜಕಾರಣ ಮಾಡುವುದಕ್ಕೆಂದೇ ಇಲ್ಲಿಗೆ ಬಂದವನು ಎಂದು ಶಿವಕುಮಾರ್ ಹೇಳಿದರು.

ಈ ಕ್ಷಣದಲ್ಲಿ ನೀವು ಕೇಳುವ ಯಾವುದೇ ಪ್ರಶ್ನೆಗಳಿಗೂ ಉತ್ತರ ಕೊಡುವ ಸ್ಥಿತಿಯಲ್ಲಿ ನಾನಿಲ್ಲ. ಇದು ಸೂಕ್ಷ್ಮ ವಿಚಾರ. ಬಾಯಿಗೆ ಬಂದಂತೆ ಮಾತನಾಡಲು ಸಾಧ್ಯವಿಲ್ಲ. ಐಟಿ ಅಧಿಕಾರಿಗಳ ಪಂಚನಾಮೆ ಮುಗಿದು ವಾಸ್ತವಾಂಶಗಳು ಹೊರಬಂದ ನಂತರ ಎಲ್ಲವನ್ನೂ ತಿಳಿಸುತ್ತೇನೆ. ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಅದು ಹೊರ ಬರಲೇಬೇಕು.

ಎಲ್ಲೆಲ್ಲಿ , ಯಾರ್ಯಾರ ಮನೆಗಳ ಮೇಲೆ ಎಷ್ಟು ಕಡೆ ದಾಳಿಯಾಗಿದೆ ಎಂಬುದು ನಾನು ಮಾಧ್ಯಮಗಳಲ್ಲಿ ನೋಡಿದ್ದೆ ಹೊರತು ಸ್ವತಃ ನನಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮಗಳು ಇಂದಿನವರೆಗೂ ತಮಗೆ ಮಾಹಿತಿ ಲಭ್ಯವಾದಂತೆ, ಖುಷಿ ಬಂದಂತೆ ವರದಿ ಮಾಡಿವೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮವೂ ಒಂದು ಅಂಗ. ನಿಮ್ಮನ್ನು ಬಿಟ್ಟು ನಾವು ಪ್ರತ್ಯೇಕ ಇರಲು ಸಾಧ್ಯವಿಲ್ಲ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಎಂದೂ ಶಿವಕುಮಾರ್ ತಿಳಿಸಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ಹಗಲು ರಾತ್ರಿ ಎನ್ನದೆ ನನ್ನ ಮನೆ, ಕಚೇರಿ ಮುಂದೆ ಕಾದಿದ್ದೀರಿ. ನಿಮ್ಮನ್ನು ನಿರಾಸೆಪಡಿಸಲು ನನಗೆ ಇಷ್ಟವಿಲ್ಲ ಎಂದು ಮಾಧ್ಯಮದವರನ್ನು ಸಮಾಧಾನಪಡಿಸಿದರು.

ನಂಬಿದ ದೇವರು ಕೈಬಿಡಲ್ಲ:

ನಾನು ದೇವರನ್ನು ನಂಬಿದವನು. ನಂಬಿದವನನ್ನು ದೇವರು ಕೈಬಿಡುವುದಿಲ್ಲ. ಆ ಅಚಲ ನಂಬಿಕೆ ನನಗಿದೆ. ನಾನೀಗ ನನ್ನ ದಾರಿ ಕಾಯುತ್ತಿರುವ ಗುಜರಾತ್ ಶಾಸಕರನ್ನು ಭೇಟಿ ಮಾಡಲು ರೆಸಾರ್ಟ್‍ಗೆ ತೆರಳುತ್ತಿದ್ದೇನೆ. ಮೊದಲು ಅವರನ್ನು ಭೇಟಿ ಮಾಡಬೇಕು. ನಿಮ್ಮ ಹಲವು ಪ್ರಶ್ನೆಗಳಿಗೆ ನಿಧಾನವಾಗಿ ಉತ್ತರಿಸುವೆ ಎಂದು ಹೇಳಿದರು.

ನನ್ನಿಂದ ನಮ್ಮ ಪೊಲೀಸ್ ಇಲಾಖೆ ಸ್ನೇಹಿತರಿಗೆ, ಮಾಧ್ಯಮದವರಿಗೆ ಸಾಕಷ್ಟು ತೊಂದರೆ, ನೋವಾಗಿದೆ. ಅದಕ್ಕಾಗಿ ವಿಷಾದಿಸುತ್ತೇನೆ. ಕ್ಷಮೆ ಇರಲಿ ಎಂದು ಹೇಳಿ ಇನ್ನೂ ಕೂಡ ಪ್ರಶ್ನೆ ಕೇಳುತ್ತಿದ್ದ ಪತ್ರಕರ್ತರಿಗೆ ವಂದಿಸಿ ಹೊರಟುಹೋದರು. ಕೆಲವು ಪತ್ರಕರ್ತರು ಅವರ ಹಿಂದೆ ಹೋಗಿ ನಿನ್ನೆ ನಿಮ್ಮ ತಾಯಿಯವರು ನೀಡಿದ ಹೇಳಿಕೆ ಬಗ್ಗೆ ಹೇಳಿ ಎಂದು ಕೇಳಿದರಾದರೂ, ಸಚಿವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin