ಡಿಕೆಶಿಯ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿಯಾಗಲಿದೆಯೇ ಐಟಿ ರೇಡ್..!?

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--077

ಬೆಂಗಳೂರು, ಆ.5- ಮೂರು ದಿನಗಳಿಂದ ರಾಜ್ಯದ ಪ್ರಭಾವಿ ಸಚಿವ ಡಿ. ಕೆ. ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ನಡೆಯುತ್ತಿರುವ ಐಟಿ ದಾಳಿಯ ಅಂತ್ಯ, ಹೊಸ ರಾಜಕೀಯ ಅಧ್ಯಾಯವೊಂದರ ಆರಂಭಕ್ಕೆ ಮುನ್ನುಡಿ ಬರೆಯಲಿದೆ.  ಹೀಗೊಂದು ವಿಶ್ಲೇಷಣೆ ಈಗ ರಾಜಕೀಯ ಹಾಗೂ ಕಾನೂನು ಪರಿಣಿತರ ವಲಯದಲ್ಲಿ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆಯ ದಾಳಿ ಒಂದು ವೇಳೆ ಡಿ. ಕೆ. ಶಿವಕುಮಾರ್ ಅವರ ಬಂಧನದಲ್ಲಿ ಅಂತ್ಯವಾದರೆ, ಅದು ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಅನುವು ಮಾಡಿಕೊಡಲಿದೆ. ಅದರಲ್ಲೂ ವಿಶೇಷವಾಗಿ ಆಡಳಿತರೂಢ ಕಾಂಗ್ರೆಸ್ ಪಕ್ಷದೊಳಗಿನ ಸಮೀಕರಣಗಳನ್ನೇ ಬದಲಿಸಲಿದೆ. ಒಂದು ವೇಳೆ, ಐಟಿ ಅಧಿಕಾರಿಗಳು ದಾಳಿಗಷ್ಟೆ ಸೀಮಿತವಾದರೆ ಡಿ. ಕೆ. ಶಿವಕುಮಾರ್ ರಾಜಕೀಯ ಭವಿಷ್ಯ ಹೊಸ ಮನ್ವಂತರಕ್ಕೆ ತೆರೆದುಕೊಳ್ಳಲಿದೆ. ಒಟ್ಟಾರೆ, ಐಟಿ ದಾಳಿಯ ಕ್ಲೈಮ್ಯಾಕ್ಸ್ ಮೇಲೆಯೇ ಮುಂದಿನ ದಿನಗಳ ಲೆಕ್ಕಾಚಾರಗಳು ನಿಂತಿವೆ.

ಪ್ರಭಾವಿ ಸಚಿವ:

ವರದಿಗಳ ಪ್ರಕಾರ, ಸದ್ಯ ನಡೆಯುತ್ತಿರುವ ಐಟಿ ದಾಳಿ ಡಿಕೆಶಿಗೆ ಅನಿರೀಕ್ಷಿತವೇನಲ್ಲ. ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಅಧಿಕೃತವಾಗಿಯೇ ಸುಮಾರು 400 ಚಿಲ್ಲರೆ ಕೋಟಿ ಆಸ್ತಿ ಘೋಷಿಸಿಕೊಂಡಿದ್ದ ರಾಜಕಾರಣಿಗೆ ತನ್ನ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಬಹುದು ಎಂಬ ಮನ್ಸೂಚನೆಯೂ ಸಿಕ್ಕಿತ್ತು.

ಮೊನ್ನೆ ದಾಳಿಗೆ ಒಂದು ದಿನ ಮೊದಲೇ ಡಿಕೆಶಿ ಅವರ ಆಪ್ತ ವಲಯದಲ್ಲಿದ್ದ ವಾಹಿನಿಯೊಂದು ರಾಜ್ಯದ ಇಬ್ಬರು ಪ್ರಭಾವಿ ಸಚಿವರ ಮೇಲೆ ಐಟಿ ದಾಳಿ ನಡೆಯಲಿದೆ ಎಂದು ಸುದ್ದಿ ಭಿತ್ತರಿಸಿತ್ತು. ಈ ಮೂಲಕ ದಾಳಿಯ ವಿವರ ಸೋರಿಕೆಯಾಗಿದೆ ಎಂದು ಬಿಂಬಿಸುವ ಪ್ರಯತ್ನವೂ ಅದರ ಹಿಂದಿತ್ತು. ಮಾಹಿತಿ ಸೋರಿಕೆಯಾಗಿದೆ ಎಂಬ ಕಾರಣಕ್ಕೆ ದಾಳಿ ಮುಂದೂಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸುದ್ದಿ ಭಿತ್ತರಗೊಂಡಿರುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.

ಹೀಗಿದ್ದೂ ಬುಧವಾರ ಮುಂಜಾನೆ 7 ಗಂಟೆಗೆ ಡಿಕೆಶಿ ಮನೆ ಹಾಗೂ ಗುಜರಾತ್ ಶಾಸಕರು ನೆಲೆಸಿದ್ದ ಈಗಲ್ಟನ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ಆರಂಭವಾದ ಮೊದಲ ದಿನ ಸಂಜೆ ವೇಳೆಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಡಿಕೆಶಿ ಅವರ ದಿಲ್ಲಿಯ ಮನೆಯಲ್ಲಿ ಸಿಕ್ಕ ನೋಟಿನ ಕಂತೆಗಳು ಎನ್ನಲಾದ ಚಿತ್ರಗಳು ಭಿತ್ತರಗೊಂಡವು. ಸಾಮಾನ್ಯವಾಗಿ ಎಲ್ಲಾ ಐಟಿ ದಾಳಿಗಳು ಅಥವಾ ಯಾವುದೇ ತನಿಖಾ ಸಂಸ್ಥೆಗಳ ದಾಳಿ ನಡೆದಾಗಲೂ ಅದೇ ಮಾದರಿಯ ನೋಟಿ ಕಂತೆಗಳ ಭಾವಚಿತ್ರಗಳು ಭಿತ್ತರವಾಗುತ್ತವೆ. ಇವುಗಳನ್ನು ಒಪ್ಪುವುದು, ಬಿಡುವುದು ವೀಕ್ಷಕರಿಗೆ ಬಿಟ್ಟ ವಿಚಾರವಾಗಿರುತ್ತದೆ.
ಆದರೆ, ದಾಳಿಯ ಎರಡನೆ ದಿನ ಮಧ್ಯಾಹ್ನದ ಹೊತ್ತಿಗೆ ಡಿಕೆಶಿ ಅವರ ಸದಾಶಿವನಗರದ ಮನೆಯಲ್ಲಿ ಮೊದಲ ದಿನ ನಡೆದ ಪಂಚನಾಮದ ವರದಿ ಹೊರಬಂತು. ಅದರಲ್ಲಿ ದಾಳಿಯ ವೇಳೆ ದಾಖಲೆಗಳು ಮಾತ್ರವೇ ಸಿಕ್ಕವು ಎಂಬದಕ್ಕೆ ಪುರಾವೆ ನೀಡಲಾಯಿತು. ಡಿಕೆಶಿ ಅವರ ಹಿನ್ನಲೆ ಗೊತ್ತಿರುವ ಸಾಮಾನ್ಯ ಜನ ಕೂಡ ಅವರ ಮನೆಯಲ್ಲಿ ಹಣ ಮತ್ತು ಚಿನ್ನ ಇಲ್ಲ ಎಂಬದನ್ನು ನಂಬಲಾರರು. ಹಾಗಂತ ಐಟಿ ದಾಳಿಯ ಮುನ್ಸೂಚನೆ ಇದ್ದೂ ಮನೆಯಲ್ಲಿ ನಗದು, ಚಿನ್ನ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳಲು ಯಾರೂ ಕೂಡ ಮುಂದಾಗುವುದಿಲ್ಲ ಎಂಬುದು ಕೂಡ ಅಷ್ಟೆ ಸತ್ಯ. ಒಟ್ಟಾರೆ, ದಾಳಿ ಮುಂದುವರಿಯುತ್ತಿರುವ ವೇಳೆಯಲ್ಲಿಯೇ ಎರಡೂ ಕಡೆಗಳಿಂದ ತಮಗೆ ಪೂರಕವಾದ ಮಾಹಿತಿಯನ್ನು ಸೂರಿಕೆ ಮಾಡುವ ಪ್ರಯತ್ನಗಳಿವು ಅಷ್ಟೆ.
ಡಿಕೆಶಿ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಅನಿರೀಕ್ಷಿತ ಅಲ್ಲದಿದ್ದರೂ, ಅದು ನಡೆದ ಸಮಯ ಮಾತ್ರ ರಾಜಕೀಯ ಬಣ್ಣ ಪಡೆದುಕೊಳ್ಳಲು ಕೊಡುಗೆ ನೀಡಿತು. ¾¾ಗುಜರಾತ್ ಶಾಸಕರನ್ನು ಬೆಂಗಳೂರಿಗೆ ಕಳುಹಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿತು. ಆದರೆ ಇಲ್ಲಿ ಅದರ ಹೊಣೆಯನ್ನು ಹೊತ್ತುಕೊಳ್ಳಲು ಯಾವ ನಾಯಕರೂ ಸಿದ್ಧರಿರಲಿಲ್ಲ. ಕೊನೆಗೆ ಡಿಕೆಶಿ ಹೈಕಮಾಂಡ್ ತೀರ್ಮಾನವನ್ನು ಅನುಷ್ಠಾನಗೊಳಿಸಲು ಮುಂದಾದರು.
ಇದೀಗ ಐಟಿ ದಾಳಿ ನಂತರವೂ ಡಿ. ಕೆ. ಶಿವಕುಮಾರ್ ಅವರಿಗೆ ರಾಜಕೀಯ ಲಾಭ ಆಗಲಿದೆ ಎಂಬ ವಾದಕ್ಕೆ ಇದು ಕಾರಣ. ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರ ರಾಜ್ಯಸಭಾ ಸ್ಥಾನಕ್ಕಾಗಿ ನಡೆಯುತ್ತಿರುವ ರಾಜಕೀಯ ಗುದ್ದಾಟದಲ್ಲಿ ಡಿಕೆಶಿ ಗುರುತವಾದ ಹೊಣೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅದೇ ಕಾರಣಕ್ಕೆ ಐಟಿ ದಾಳಿ ನಡೆದಿದೆ ಎಂದು ಈಗ ಬಿಂಬಿಸಲ್ಪಡುತ್ತಿದೆ. ಸಹಜವಾಗಿಯೇ, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಪ್ರಭಾವಿ ಸಚಿವ ತನ್ನ ಸೇನಾಧಿಪತಿ ಎಂದು ಇನ್ನಷ್ಟು ಹತ್ತಿರಕ್ಕೆ ಎಳೆದುಕೊಳ್ಳಲು ಇದೊಂದು ಕಾರಣ ಸಾಕಾಗುತ್ತದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆರಂಭದಲ್ಲಿ ಡಿ. ಕೆ. ಶಿವಕುಮಾರ್ ಅವರನ್ನು ಸಂಪುಟದಿಂದ ಹೊರಗಿಡಲಾಗಿತ್ತು. ಲಾಭದಾಯಕ ಹುದ್ದೆಗಳಿಂದ ದೂರು ಉಳಿಸಲಾಗಿತ್ತು. ಕೊನೆಗೆ ಸಚಿವ ಸ್ಥಾನ ಸಿಗಲು ಹೈಕಮಾಂಡ್ ಮಧ್ಯ ಪ್ರವೇಶ ಮಾಡಬೇಕಾಯಿತು. ಇಷ್ಟೆಲ್ಲಾ ನಡೆದ ನಂತ ಡಿಕೆಶಿ ಅವರ ಕಣ್ಣು ಕೆಪಿಸಿಸಿ ಅಧ್ಯಕ್ಷ ಗಾಧಿಯ ಮೇಲಿತ್ತು. ಆದರೆ ಕೊನೆ ಕ್ಷಣದಲ್ಲಿ ಅದರಿಂದಲೂ ಅವರನ್ನು ದೂರ ಮಾಡಲಾಯಿತು. ಇವೆಲ್ಲ ಬೆಳವಣಿಗೆಗಳ ಪರಿಣಾಮ ಡಿಕೆಶಿ ಸಹೋದರರು ಸಿಎಂ ಸಿದ್ದರಾಮಯ್ಯ ಮೇಲೆ ಅಸಮಾಧಾನ ಹೊಂದಿರುವ ಸಾಧ್ಯತೆಗಳಿವೆ. ಅಷ್ಟೆ ಅಲ್ಲ ಅದೇ ಲಹರಿಯಲ್ಲಿ ಮನೆಯಲ್ಲಿಯೂ ಚರ್ಚೆ ನಡೆದಿರಬಹುದು. ಅದೀಗ ಅವರ ತಾಯಿಯ ಮುಗ್ಧ ಪ್ರತಿಕ್ರಿಯೆಯಲ್ಲಿ ಹೊರಬಿದ್ದಿದೆ. ಇದು ಕಾಂಗ್ರೆಸ್ ನಾಯಕರ ನಡುವಿನ ಸಮೀಕರಣವನ್ನು ಅರ್ಥ ಮಾಡಿಕೊಳ್ಳಲು ನೆರವು ನೀಡುತ್ತಿದೆ.

ಬಂಧನದ ಸುತ್ತ:
ಹೀಗಾಗಿಯೇ, ಐಟಿ ದಾಳಿಯ ಅಂತ್ಯ ಡಿ. ಕೆ. ಶಿವಕುಮಾರ್ ಅವರ ಬಂಧನದಲ್ಲಿ ಕೊನೆಯಾಗುತ್ತೋ, ಇಲ್ಲವೋ ಎಂಬ ಲೆಕ್ಕಾಚಾರಕ್ಕೆ ಅನುವು ಮಾಡಿಕೊಟ್ಟಿದೆ. ಮೂಲಗಳ ಪ್ರಕಾರ, ರಾಜ್ಯ ಬಿಜೆಪಿಯ ಹಲವು ನಾಯಕರು ಡಿ.ಕೆ.ಶಿವಕುಮಾರ್ ಮೇಲೆ ನಡೆದಿರುವ ಈ ಐಟಿ ದಾಳಿಯನ್ನು ಬೆಂಬಲಿಸಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ರಾಜಕೀಯದ ಆಚೆಗೂ ಅವರ ನಡುವೆ ಇರುವ ಔದ್ಯಮಿಕ ಹಿತಾಸಕ್ತಿಗಳು ಕಾರಣ. ಐಟಿ ದಾಳಿ ಆರಂಭವಾಗುತ್ತಿದ್ದಂತೆ ಬಿಜೆಪಿ ಕಡೆಯಿಂದ ಯಾವುದೇ ಮಾಧ್ಯಮಗಳ ಪ್ಯಾನಲ್ಗೆ ಹೋಗಬಾರದು ಎಂಬ ಫರ್ಮಾನನ್ನು ಸ್ವತಃ ಪಕ್ಷದ ರಾಜ್ಯಾಧ್ಯಕ್ಷ  ಬಿ. ಎಸ್. ಯಡಿಯೂರಪ್ಪ ನೀಡಿದ್ದರು ಎಂದು ವರದಿಯಾಗಿತ್ತು. ಆ ನಂತರ ನಿಧಾನವಾಗಿ ಬಿಜೆಪಿ ವಕ್ತಾರರು ಪ್ಯಾನಲ್ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಪ್ರಾರಂಭ ಮಾಡಿದರು.

ಹಣಬಲ ಹಾಗೂ ತಮ್ಮದೇ ಪ್ರಭಾವಗಳ ಕಾರಣಕ್ಕೆ ಪ್ರತಿಪಕ್ಷಗಳ ಸಿಂಪಥಿಯನ್ನೂ ಗಳಿಸಿಕೊಂಡಿರುವ ಡಿ. ಕೆ. ಶಿವಕುಮಾರ್ ಐಟಿ ದಾಳಿಯ ನಂತರ ಏನೂ ನಡೆದೆ ಇಲ್ಲ ಎಂದು ಮತ್ತೆ ರಾಜಕೀಯ ಆರಂಭಿಸಿದರೆ ಅದರ ಪರಿಣಾಮಗಳು ಬೇರೆಯೇ ರೀತಿಯಲ್ಲಿ ಇರಲಿವೆ. ಒಂದು ಕಡೆ ಕಾಂಗ್ರೆಸ್ ಹೈಕಮಾಂಡ್ ಅವರ ಬೆನ್ನಿಗೆ ನಿಲ್ಲಲಿದೆ. ಮತ್ತೊಂದು ಕಡೆ ಅವರನ್ನು ವೈಯಕ್ತಿಕ ಮಟ್ಟದಲ್ಲಿ ವಿರೋಧಿಸುವ ಪ್ರತಿಪಕ್ಷದ ನಾಯಕರೂ ಇಲ್ಲ. ಇದು ಈಗಾಗಲೇ ಶ್ರೀಮಂತ ರಾಜಕಾರಣಿ ಎನ್ನಿಸಿಕೊಂಡಿರುವ ಡಿಕೆಶಿ ಅವರ ಹೊಸ ರಾಜಕೀಯ ಪರ್ವಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ. ಅದೇ ವೇಳೆಯಲ್ಲಿ, ಐಟಿ ದಾಳಿಯಲ್ಲಿ ಅಗತ್ಯ ದಾಖಲೆಗಳು ಸಿಕ್ಕಿ, ಡಿ. ಕೆ. ಶಿವಕುಮಾರ್ ಬಂಧನವಾದರೆ, ಕರ್ನಾಟಕದ ಮತ್ತೊಬ್ಬ ಗಾಲಿ ಜನಾರ್ಧನ ರೆಡ್ಡಿ ಅವರಾಗುವ ಸಾಧ್ಯತೆಗಳೂ ಇವೆ.

ಸಾಮಾನ್ಯವಾಗಿ ಆದಾಯ ತೆರಿಗೆ ಇಲಾಖೆ ತೆರಿಗೆ ವಂಚನೆಯನ್ನು ಕೇಂದ್ರವಾಗಿಟ್ಟುಕೊಂಡು ತನಿಖೆ ನಡೆಸುತ್ತದೆ. ಅದರಲ್ಲಿ ಏನಾದರೂ ದೊಡ್ಡ ಮಟ್ಟದಲ್ಲಿ, ಹಲವು ವರ್ಷಗಳಿಂದ ತೆರಿಗೆ ವಂಚಿಸಿರುವುದು ಕಂಡು ಬಂದರೆ ಮಾತ್ರವೇ ಪೀನಲ್ ಲಾ ಬಳಸಿ ಆದಾಯ ತೆರಿಗೆ ಇಲಾಖೆ ಕ್ರಮಕ್ಕೆ ಮುಂದಾಗುತ್ತದೆ. ಅಗತ್ಯ ದಾಖಲೆಗಳು ಸಿಕ್ಕರೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಅಥವಾ ಸಿಬಿಐಗೆ ವಹಿಸಬಹುದು. ಆಗ ಮಾತ್ರ ಆರೋಪಿಯ ಬಂಧನ ಸಾಧ್ಯವಾಗುತ್ತದೆ ಎನ್ನುತ್ತಾರೆ ಹಿರಿಯ ವಕೀಲ ಒಬ್ಬರು. ಹೀಗಾಗಿಯೇ, ಐಟಿ ದಾಳಿಯ ಕೊನೆಯಲ್ಲಿ ನಡೆಯುವ ಬೆಳವಣಿಗೆಯ ಮೇಲೆ ಡಿ. ಕೆ. ಶಿವಕುಮಾರ್ ಹಾಗೂ ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧಾರ ಮಾಡಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin