ಪೈಲ್ವಾನರಿಗೆ ಶಕ್ತಿ-ಸಮೃದ್ಧಿ ನೀಡುವ ‘ಮಟ್ಟಿ ಪೂಜೆ’

Mysur--01

ಮೈಸೂರು, ಆ.5- ಸಾಂಸ್ಕೃತಿಕ ನಗರಿ ಮೈಸೂರು ಕುಸ್ತಿಗೂ ಫೇಮಸ್. ರಾಜರ ಕಾಲದಿಂದಲೂ ಈ ಪಂದ್ಯಕ್ಕೆ ವಿಶೇಷ ಆದ್ಯತೆ ನೀಡುತ್ತಾ ಬರಲಾಗಿದ್ದು, ದಸರೆಯಲ್ಲಿ ನಡೆಯುವ ಕುಸ್ತಿಯಲ್ಲಿ ದೇಶಾದ್ಯಂತ ಕುಸ್ತಿಪಟುಗಳು ಭಾಗವಹಿಸುತ್ತಾರೆ. ಕುಸ್ತಿ ಪೈಲ್ವಾನರಿಗೂ ವರಮಹಾಲಕ್ಷ್ಮಿ ಹಬ್ಬಕ್ಕೂ ವಿಶೇಷತೆ ಇದೆ.
ನಗರದ ಸುಣ್ಣದ ಕೇರಿಯ ನಾಲಾ ಬೀದಿಯಲ್ಲಿರುವ ಗೋಪಾಲಸ್ವಾಮಣ್ಣನವರ ಗರಡಿಯಲ್ಲಿ ಪೈಲ್ವಾನ್ ರಂಗಪ್ಪನವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಹೆಚ್ಚು ಮಂದಿ ನಿನ್ನೆ ಮಟ್ಟಿ ಪೂಜೆ ನೆರವೇರಿಸಿದರು.

ಏನಿದು ಮಟ್ಟಿಪೂಜೆ:

ಪ್ರತಿವರ್ಷ ವರಮಹಾಲಕ್ಷ್ಮಿ ಹಬ್ಬದ ದಿನದಂದು ಈ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ.ಒಂದು ಕೊಠಡಿಯಲ್ಲಿ ಹಬ್ಬಕ್ಕೂ ಮೊದಲು ನಾಲ್ಕೈದು ದಿನಗಳ ಹಿಂದೆಯೇ ಎಂಟು ಅಡಿ ಎತ್ತರ, 10 ಅಡಿ ಅಗಲದ ಅಳತೆಯಲ್ಲಿ ಮಟ್ಟಿ (ಕೆಮ್ಮಣ್ಣನ್ನು) ವಿಶೇಷವಾಗಿ ಹಾಕಿ ಸಾಧನೆಗೆ ಬಳಸುವ ಪರಿಕರಗಳನ್ನು ಇಟ್ಟು ಅಲಂಕರಿಸಲಾಗುತ್ತದೆ.  ನಂತರ ಹಬ್ಬದ ದಿನದಂದು ಅಂತಿಮರೂಪ ನೀಡಿ 10 ಕೆಜಿ ಕುಂಕುಮ, 10 ಕೆಜಿ ಅರಿಶಿಣವನ್ನು ಗೋಪುರ ಮಾದರಿ ನಿರ್ಮಿಸಲಾಗುತ್ತದೆ. ವಿವಿಧ ಹೂವುಗಳಿಂದ ಅಲಂಕರಿಸಲಾಗುತ್ತದೆ. ಮಣ್ಣಿನ ಮಧ್ಯದಲ್ಲಿ ಸಿಪ್ಪೆ ಇರುವ ತೆಂಗಿನಕಾಯಿ, ಸೌತೆಕಾಯಿಗಳನ್ನು ಹೂತಿಡುತ್ತಾರೆ. ಇದನ್ನು ಇಟ್ಟವರಿಗೆ ಬಿಟ್ಟರೆ ಉಳಿದವರಿಗೆ ಎಲ್ಲಿಟ್ಟಿರುತ್ತಾರೆ ಎಂಬುದು ಗೊತ್ತಿರುವುದಿಲ್ಲ.

ಹಬ್ಬದ ಸಂಜೆ ಎಲ್ಲ ಪೈಲ್ವಾನರು ಕ್ರಾಫರ್ಡ್ ಹಾಲ್‍ಗೆ ತೆರಳಿ ಅಲ್ಲಿ ಮಟ್ಟಿ (ಮಣ್ಣು) ಪೂಜೆ ಮಾಡಿ ಅದನ್ನು ಎರಡು ಬುಟ್ಟಿಗಳಲ್ಲಿ ತುಂಬಿ ಇಬ್ಬರು ಪೈಲ್ವಾನರು ತಲೆಮೇಲೆ ಹೊತ್ತು ನಾಲಾ ಬೀದಿಯಲ್ಲಿರುವ ಗರಡಿ ಮನೆವರೆಗೆ ಬರಿಗಾಲಿನಲ್ಲಿ ನಡೆದು ಬರುತ್ತಾರೆ. ಗರಡಿ ಮನೆಯಲ್ಲಿ ಅಲಂಕಾರ ಮಾಡಿದ ಮಟ್ಟಿ ಜತೆ ಈ ಮಣ್ಣನ್ನು ಸೇರಿಸಿ ಪೂಜೆ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಗುತ್ತದೆ. ಮೂರ್ನಾಲ್ಕು ದಿನಗಳ ನಂತರ ಇವರು ಕಟ್ಟಿದ ಮಟ್ಟಿಯನ್ನು ಒಡೆದು ಯಾರಿಗೆ ತೆಂಗಿನಕಾಯಿ, ಸೌತೆಕಾಯಿ ಸಿಗುತ್ತದೋ ಅವರು ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತಾರೆ.

ಪೈಲ್ವಾನರು ಮಟ್ಟಿಯನ್ನು ಸಮತಟ್ಟು ಮಾಡಿ ಪ್ರತಿದಿನ ಅಲ್ಲೇ ಕುಸ್ತಿಯ ತಾಲೀಮು ಮುಂದುವರೆಸುತ್ತಾರೆ.   ವರಮಹಾಲಕ್ಷ್ಮಿ ಹಬ್ಬವು ಪೈಲ್ವಾನರಿಗೆ ಶಕ್ತಿ ಹಾಗೂ ಸಮೃದ್ದಿಯನ್ನು ಕೊಡುತ್ತದೆ ಎಂದು ನಂಬಲಾಗಿದ್ದು, ಅದಕ್ಕಾಗಿಯೇ ಮಟ್ಟಿ ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ. ನಿನ್ನೆಯವರೆಗೂ ಈ ಎಲ್ಲಾ ಪ್ರಕ್ರಿಯೆಗಳನ್ನು ಪೈಲ್ವಾನ್ ರಂಗಪ್ಪನವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin