ಉಗ್ರರಿಗೆ ನಕಲಿ ಆಧಾರ್‍, ಪಾಸ್‍ಪೋರ್ಟ್‍ ಮಾಡಿಕೊಡುತ್ತಿದ್ದ ಬಾಂಗ್ಲಾ ಭಯೋತ್ಪಾದಕನ ಬಂಧನ

Abdulla--01

ಲಕ್ನೋ, ಆ.6-ಉಗ್ರಗಾಮಿಗಳಿಗೆ ನಕಲಿ ಆಧಾರ್ ಕಾರ್ಡ್ ಮತ್ತು ಪಾಸ್‍ಪೋರ್ಟ್‍ಗಳನ್ನು ಮಾಡಿಕೊಡುತ್ತಿದ್ದ ಹಾಗೂ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಕುಮ್ಮಕ್ಕು ನೀಡುತ್ತಿದ್ದ ಬಾಂಗ್ಲಾದೇಶದ ಭಯೋತ್ಪಾದಕನೊಬ್ಬನನ್ನು ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಉತ್ತರಪ್ರದೇಶದಲ್ಲಿ ಬಂಧಿಸಿದ್ದಾರೆ. ಈತ ಅನ್ಸರುಲ್ಲಾ ಬಾಂಗ್ಲಾ ಟೀಂ (ಎಬಿಟಿ) ಎಂಬ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಯ ಸದಸ್ಯ.

ಮುಜಫರ್‍ನಗರದಲ್ಲಿ ನೆಲೆಸಿದ್ದ ಬಾಂಗ್ಲಾದ ಅಬ್ದುಲ್ಲಾ ಎಂಬ ಭಯೋತ್ಪಾದಕನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಮಹಾ ನಿರೀಕ್ಷಕ ಆಸೀಮ್ ಅರುಣ್ ತಿಳಿಸಿದ್ದಾರೆ. 2011ರಿಂದಲೂ ಈತ ಉತ್ತರ ಪ್ರದೇಶದ ವಿವಿಧೆಡೆ ನೆಲೆಸಿದ್ದ. ಕಳೆದ ಒಂದೂವರೆ ತಿಂಗಳಿನಿಂದ ಮುಜಫರ್‍ನಗರದಲ್ಲಿ ವಾಸ್ತವ್ಯ ಹೂಡಿದ್ದ. ಈತ ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಪಾಸ್‍ಪೋರ್ಟ್‍ಗಳನ್ನು ಹೊಂದಿದ್ದ ಎಂದು ಅವರು ವಿವರಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ ನಿನ್ನೆ ರಾತ್ರಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಎಟಿಎಸ್ ಅಧಿಕಾರಿಗಳು ಮುಜಫರ್ ಜಿಲ್ಲೆಯ ಚಾರ್ತಾವಾಲ್ ಪ್ರದೇಶದ ಕುಟೇಸರ ಬಡಾವಣೆಯಲ್ಲಿ ಅಬ್ದುಲ್ಲಾನನ್ನು ಬಂಧಿಸಿ, ನಕಲಿ ಕಾರ್ಡ್‍ಗಳು, ಪಾಸ್‍ಪೋರ್ಟ್‍ಗಳು ಹಾಗೂ ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಈತ ಕೆಲವು ಉಗ್ರಗಾಮಿಗಳು ಮತ್ತು ಸಮಾಜಘಾತುಕ ಶಕ್ತಿಗಳಿಗೆ ನಕಲಿ ಆಧಾರ್ ಕಾರ್ಡ್ ಮತ್ತು ಪಾಸ್‍ಪೋರ್ಟ್‍ಗಳನ್ನು ಮಾಡಿಕೊಟ್ಟಿರುವ ಬಗ್ಗೆ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ವಿಶೇಷವಾಗಿ ಬಾಂಗ್ಲಾದೇಶದ ಉಗ್ರರಿಗೆ ನಕಲಿ ಗುರುತಿನ ಚೀಟಿಗಳನ್ನು ಸೃಷ್ಟಿಸುವುದರಲ್ಲಿ ಸಿದ್ದಹಸ್ತನಾಗಿದ್ದ ಈಗ ಅವರು ಭಾರತದಲ್ಲಿ ಸುರಕ್ಷಿತವಾಗಿ ಅಡಗಲು ನೆರವು ನೀಡುತ್ತಿದ್ದ ಸಂಗತಿಯೂ ಬಯಲಾಗಿದೆ.  ಅನ್ಸರುಲ್ಲಾ ಬಾಂಗ್ಲಾ ಟೀಂ (ಎಬಿಟಿ) ಉಗ್ರಗಾಮಿ ಸಂಘಟನೆ ಅಲ್-ಖೈದಾದಿಂದ ಪ್ರೇರಣೆ ಪಡೆದು ಬಾಂಗ್ಲಾದಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ಶಾಮೀಲಾಗಿದೆ. ಅಬ್ದುಲ್ಲಾ ಬಂಧನದ ನಂತರ ಎಟಿಎಸ್ ಅಧಿಕಾರಿಗಳು ಮುಜಫರ್‍ನಗರ, ಸಹರನ್‍ಪುರ್ ಮತ್ತು ಶಾಮ್ಲಿ ಮೊದಲಾದ ಪ್ರದೇಶಗಳಲ್ಲಿ ತೀವ್ರ ಶೋಧ ಮುಂದುವರಿಸಿದ್ದಾರೆ.

ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈತ ಉಗ್ರಗಾಮಿಗಳೊಂದಿಗೆ ಹೊಂದಿರುವ ನಂಟು ಹಾಗೂ ಮತ್ತಿತ್ತರ ಅಕ್ರಮಗಳ ಬಗ್ಗೆ ಮಾಹಿತಿ ಲಭಿಸುವ ಸಾಧ್ಯತೆ ಇದೆ ಎಂದು ಎಟಿಎಸ್ ಐಜಿ ಆಸೀಮ್ ಅರುಣ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin