ಕಲಹಪ್ರಿಯ ಉತ್ತರ ಕೊರಿಯಾಗೆ ವಿಶ್ವಸಂಸ್ಥೆ ಆರ್ಥಿಕ ದಿಗ್ಬಂಧನ, ಟ್ರಂಪ್ ದಿಲ್ ಖುಷ್

Trtump--01

ವಿಶ್ವಸಂಸ್ಥೆ, ಆ.6- ಅಣ್ವಸ್ತ್ರ ಕ್ಷಿಪಣಿಗಳ ಪರೀಕ್ಷೆಗಳನ್ನು ನಡೆಸುತ್ತಾ ಜಾಗತಿಕ ಆತಂಕ ಸೃಷ್ಟಿಸುತ್ತಿರುವ ಕಲಹಪ್ರಿಯ ದೇಶ ಉತ್ತರ ಕೊರಿಯಾ ವಿರುದ್ಧ ಕಠಿಣ ದಿಗ್ಬಂಧನ ವಿಧಿಸುವ ನಿರ್ಣಯಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಸರ್ವಾನುಮತದ ಬೆಂಬಲ ನೀಡಿವೆ. ಈ ಕ್ರಮದಿಂದಾಗಿ ಪಯೊಂಗ್‍ಯಾಂಗ್‍ಗೆ ವಾರ್ಷಿಕ ಒಂದು ಶತಕೋಟಿ ಡಾಲರ್ ಆದಾಯಕ್ಕೆ ಕುತ್ತುಂಟಾಗಿದೆ.  ಯುದ್ಧೋನ್ಮಾದ ಉತ್ತರ ಕೊರಿಯಾ ಮೇಲೆ ಕಠಿಣ ದಿಗ್ಬಂಧನಗಳನ್ನು ವಿಧಿಸುವ ಅಮೆರಿಕದ ಕರಡು ನಿರ್ಣಯಕ್ಕೆ 15 ಸದಸ್ಯ ದೇಶಗಳು ಒಕ್ಕೊರಲಿನ ಬೆಂಬಲ ಸೂಚಿಸಿದವು.

ಏಷ್ಯಾ ಖಂಡ ಸೇರಿದಂತೆ ವಿವಿಧ ದೇಶಗಳಿಗೆ ಆತಂಕ ಸೃಷ್ಟಿಸುವ ರೀತಿಯಲ್ಲಿ ಕ್ಷಿಪಣಿಗಳು ಮತ್ತು ಆಣ್ವಸ್ತ್ರಗಳನ್ನು ಪರೀಕ್ಸಿಸುತ್ತಿರುವ ಉತ್ತರ ಕೊರಿಯಾಗೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಅದನ್ನು ಲೆಕ್ಕಿಸದೇ ಜುಲೈ 3 ಮತ್ತು 28ರಂದು ಖಂಡಾಂತರ ಕ್ಷಿಪಣಿಗಳನ್ನು ಪ್ರಯೋಗಿಸಿ ಮತ್ತಷ್ಟು ಆತಂಕ ಸೃಷ್ಟಿಸಿತ್ತು.  ಉದ್ಧಟತನ ತೋರುತ್ತಿರುವ ಪಯೊಂಗ್‍ಯಾಂಗ್‍ಗೆ ಬುದ್ದಿ ಕಲಿಸಲು ಅಮೆರಿಕ ನಿರ್ಧರಿಸಿತ್ತು. ಉತ್ತರ ಕೊರಿಯಾದ ಪ್ರಮುಖ ವಾಣಿಜ್ಯ ಪಾಲುದಾರ ದೇಶವಾದ ಚೀನಾ ಮತ್ತು ನೆರೆಹೊರೆ ದೇಶಗಳೊಂದಿಗೆ ಈ ಸಂಬಂಧ ಮಾತುಕತೆ ನಡೆಸಿ ಪಯೊಂಗ್‍ಯಾಂಗ್ ಮೇಲೆ ಆರ್ಥಿಕ ದಿಗ್ಬಂಧನಕ್ಕೆ ಸಹಕಾರ ನೀಡುವಂತೆ ಮನವೊಲಿಸುವಲ್ಲಿ ಅಮೆರಿಕ ಯಶಸ್ವಿಯಾಗಿದೆ.

ಟ್ರಂಪ್ ಖುಷ್ :

ಉತ್ತರ ಕೊರಿಯಾ ವಿರುದ್ಧ ಕಠಿಣ ಆರ್ಥಿಕ ದಿಗ್ಬಂಧನ ವಿಧಿಸಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಲಿ ನಿರ್ಣಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದಾರೆ. ಈ ಗೊತ್ತುವಳಿಗೆ ಬೆಂಬಲ ಸೂಚಿಸಿರುವ ರಷ್ಯಾ ಮತ್ತು ಚೀನಾವನ್ನು ಟ್ರಂಪ್ ಪ್ರಶಂಸಿಸಿದ್ದಾರೆ.ಕಿಮ್ ಗರಂ : ತಮ್ಮ ದೇಶದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿರುವ ವಿಶ್ವಸಂಸ್ಥೆ ನಿರ್ಣಯಕ್ಕೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥ ಕ್ರಮಗಳಿಗೆ ತಮ್ಮ ದೇಶ ಜಗ್ಗುವುದಿಲ್ಲ ಎಂದು ಗುಡುಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin