ಡಿಕೆಶಿಗೆ ಧೈರ್ಯ ತುಂಬಿದ ಕಾಂಗ್ರೆಸ್ ನಾಯಕರು, ಸೇಡಿನ ರಾಜಕೀಯದ ವಿರುದ್ಧ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ಬೆಂಗಳೂರು, ಆ.6- ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ಇಡೀ ಕಾಂಗ್ರೆಸ್ ನಿಂತಿದೆ. ಐಟಿ ದಾಳಿ ಅಂತ್ಯವಾದ ಬೆನ್ನಲ್ಲೆ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಇಂದು ಕಾಂಗ್ರೆಸ್ ದಂಡೇ ತೆರಳಿತ್ತು. ಘಟಾನುಘಟಿ ನಾಯಕರು ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ನೀವು ಅಧೀರರಾಗಬೇಡಿ. ನಿಮ್ಮ ಜತೆ ನಾವಿದ್ದೇವೆ. ನಿಮ್ಮ ಮನೆ ಮೇಲಿನ ಐಟಿ ದಾಳಿ ರಾಜಕೀಯ ಷಡ್ಯಂತ್ರ. ಇದನ್ನು ರಾಜಕೀಯವಾಗಿಯೇ ಎದುರಿಸೋಣ ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ಆರ್.ವಿ.ದೇವರಾಜ್, ಕಾಂಗ್ರೆಸ್ ಮುಖಂಡ ಜಿ.ಎ.ಬಾವ, ಮೇಯರ್ ಜಿ.ಪದ್ಮಾವತಿ, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು ಸೇರಿದಂತೆ ಅನೇಕ ಗಣ್ಯರು ಇಂದು ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಧೈರ್ಯ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.
ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಗುಜರಾತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ರಕ್ಷಣೆ ನೀಡಿದ ಬಗ್ಗೆ ನಡೆದ ಐಟಿ ದಾಳಿ, ಕೇಂದ್ರ ಸರ್ಕಾರ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿರುವ ಬಗ್ಗೆ ಮತ್ತು ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಪ್ರಭಾವಿ ಮುಖಂಡರ ಮೇಲೆ ನಡೆಯಲಿರುವ ಸಂಭಾವ್ಯ ಐಟಿ, ಇಡಿ ದಾಳಿ ಪ್ರಸ್ತುತ ನಡೆದಿರುವ ಐಟಿ, ಇಡಿ ದಾಳಿ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳು ರಾಜಕೀಯ ಸೇಡಿನ ವಿರುದ್ಧ, ರಾಜಕೀಯ ಹೋರಾಟದ ಬಗ್ಗೆ ಮಹತ್ವದ ಮಾತುಕತೆ ನಡೆಸಿದರಲ್ಲದೆ ಕಾಂಗ್ರೆಸ್ ಪಕ್ಷ ಡಿ.ಕೆ.ಶಿವಕುಮಾರ್ ಅವರ ಬೆಂಬಲಕ್ಕಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಊಹಾಪೋಹದ ಸುದ್ದಿಗಳಿಗೆ ಮಾನ್ಯತೆ ಕೊಡಬೇಡಿ. ಹೈಕಮಾಂಡ್ ಯಾವುದೇ ಮಾಹಿತಿ ನೀಡಿಲ್ಲ. ತಮಗೆ ಸಂಪೂರ್ಣ ಬೆಂಬಲ ನೀಡುವಂತೆ ಸೂಚಿಸಿದೆ. ತಾವು ಅಧೀರರಾಗುವುದು ಬೇಡ. ನಿಮ್ಮ ಪ್ರಾಬಲ್ಯ ಎಷ್ಟೆಂಬುದು ಪಕ್ಷಕ್ಕೆ ಗೊತ್ತಿದೆ. ನಾವೆಲ್ಲ ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂಬುದನ್ನು ಅವರು ಡಿಕೆಶಿ ಅವರಿಗೆ ತಿಳಿಸಿದ್ದಾರೆ. ಅದೇ ರೀತಿ ಇನ್ನೂ ಹಲವಾರು ಮುಖಂಡರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಇಂದು ಸಂಜೆ ಅಥವಾ ನಾಳೆ ದೆಹಲಿಗೆ ತೆರಳಲಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಅವರನ್ನು ಭೇಟಿ ಮಾಡಲಿದ್ದು, ತಮಗೆ ವಹಿಸಿದ್ದ ಗುಜರಾತ್ ರಾಜ್ಯಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಿ ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಐಟಿ ದಾಳಿ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಸುದ್ದಿಗಳಿಂದ ಕೊಂಚ ಜರ್ಝರಿತರಾದಂತೆ ಕಂಡುಬಂದಿದ್ದ ಡಿ.ಕೆ.ಶಿವಕುಮಾರ್ ಇಂದು ಲವಲವಿಕೆಯಿಂದ ಇದ್ದರು. ಎಲ್ಲ ಪಕ್ಷಗಳ ಮುಖಂಡರು, ಸ್ನೇಹಿತರು, ಕೆಪಿಸಿಸಿ ಅಧ್ಯಕ್ಷರು, ಶಾಸಕರು, ತಮ್ಮನ್ನು ಭೇಟಿ ಮಾಡಿದ ಸಚಿವರು, ಅನೇಕ ಗಣ್ಯರೊಂದಿಗೆ ಖುಷಿಯಾಗಿಯೇ ಮಾತನಾಡುತ್ತಿದ್ದರು. ಆತ್ಮವಿಶ್ವಾಸವನ್ನು ಅವರು ಕಳೆದುಕೊಂಡಿರಲಿಲ್ಲ. ನಿನ್ನೆಯೇ ಅವರು ನಾನು ಪಾರದರ್ಶಕವಾಗಿಯೇ ಇದ್ದೇನೆ. ಎಲ್ಲದಕ್ಕೂ ಕಾನೂನಿನ ಪ್ರಕಾರವೇ ಉತ್ತರ ನೀಡುತ್ತೇನೆ ಎಂದು ತಿಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin