ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಪಕ್ಕಾ, ಬಿಎಸ್‍ವೈ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

BJP

ಬೆಂಗಳೂರು, ಆ.6- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ನಂ.1 ಆಗಿದ್ದು, ಜಾತಿ ಜಾತಿಗಳ ನಡುವೆ ಒಡಕು ತರುತ್ತಿದೆ. ಕನ್ನಡ ಧ್ವಜದಲ್ಲೂ ರಾಜಕಾರಣ ಮಾಡುತ್ತಿದೆ. ಏನೇ ಆದರೂ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಎಸ್ಸಿ-ಎಸ್ಟಿ ಸಮುದಾಯಗಳು ತಮ್ಮ ಜೇಬಿನಲ್ಲಿದ್ದಾರೆ ಎಂಬ ಭ್ರಮೆಯಲ್ಲಿ ಇದೆ. ಆದರೆ ಅದು ಸುಳ್ಳು, ಇತ್ತೀಚೆಗೆ ನಡೆದ ವಿಸ್ತಾರಕ್ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿದಾಗ ಈ ಸತ್ಯ ಅರಿವಾಗಿದೆ ಎಂದರು. 150 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿದು ಕರ್ನಾಟಕವನ್ನು ಮಾದರಿ ರಾಜ್ಯ ಮಾಡುವ ಗುರಿಯನ್ನು ಬಿಜೆಪಿ ವರಿಷ್ಠರು ನಮಗೆ ನೀಡಿದ್ದಾರೆ. ನಾವು ಅದನ್ನು ಈಡೇರಿಸಲೇಬೇಕು. ಜನ ನಮ್ಮ ಬೆಂಬಲಕ್ಕಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಆಡಳಿತದಿಂದ ಆರ್ಥಿಕಾಭಿವೃದ್ಧಿ ಮೂರುಪಟ್ಟು ಹೆಚ್ಚಾಗಿದೆ. ಮೋದಿ ಅವರ ನಾಯಕತ್ವಕ್ಕೆ ಎದುರಾಳಿಗಳೇ ಇಲ್ಲ ಎಂಬಂತಾಗಿದೆ. ರಾಹುಲ್‍ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಹಿಂದೇಟು ಹಾಕಲಾಗಿದೆ. ಮೋದಿ ಅವರ ನಾಯಕತ್ವದ ಮುಂದೆ ಕಾಂಗ್ರೆಸ್‍ನ ಎಲ್ಲರೂ ಮಂಕಾಗಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಸರ್ಕಾರ ಎಲ್ಲಾ ಕಾರ್ಯಕ್ರಮಗಳಲ್ಲೂ ಲೂಟಿ ಹೊಡೆಯಲು ಆರಂಭಿಸಿದೆ. ಇತ್ತೀಚೆಗೆ ನಡೆದ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲೂ 30 ಕೋಟಿ ಅಕ್ರಮ ನಡೆದಿದೆ. ಅಂಬೇಡ್ಕರ್, ಬಾಬು ಜಗಜೀವನರಾಮ್ ಅವರಿಗೆ ಅಪಮಾನ ಮಾಡಿದ ಕಾಂಗ್ರೆಸ್ ಈಗ ವಿಚಾರಣ ಸಂಕೀರಣ ಹೆಸರಲ್ಲೂ ಲೂಟಿ ಮಾಡಿ ಅವಮಾನಿಸಿದೆ ಎಂದು ಕಿಡಿ ಕಾರಿದರು. ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಹೋರಾಟ ಮಾಡಬೇಕು. ಪ್ರತಿಯೊಂದು ಹಗರಣಗಳ ದಾಖಲೆಗಳನ್ನು ಪಡೆದು ಬಯಲು ಮಾಡಿ ಜನರಿಗೆ ವಿಷಯ ತಿಳಿಸಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಸರ್ಕಾರ ಎಲ್ಲಾ ರಂಗದಲ್ಲೂ ವಿಫಲವಾಗಿದೆ. ಅದನ್ನು ಮರೆಮಾಚಿಕೊಳ್ಳಲು ಜಾತಿ ಜಾತಿಗಳ ನಡುವೆ ಒಡಕು ಉಂಟು ಮಾಡುತ್ತಿದೆ. ಅನಗತ್ಯವಾಗಿ ವೀರಶೈವ, ಲಿಂಗಾಯಿತ ಧರ್ಮಗಳನ್ನು ಕೆಣಕಿದೆ. ವಿವಾದವೇ ಇಲ್ಲದಿದ್ದ ಕನ್ನಡದ ಧ್ವಜದಲ್ಲೂ ವಿವಾದಕ್ಕೆ ಎಡೆಮಾಡಿಕೊಟ್ಟಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin