ಎಲೆಕ್ಷನ್ ಪ್ಲಾನ್ ಮಾಡಲು 12 ರಂದು ಬೆಂಗಳೂರಿಗೆ ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

Amith-Shah--01

ಬೆಂಗಳೂರು, ಆ.7- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಯೋಜನೆಗಳು, ಅನುಸರಿಸಬೇಕಾದ ರಣತಂತ್ರ ಸೇರಿದಂತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇದೇ 12 ರಿಂದ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮೂರು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿರುವ ಅಮಿತ್ ಷಾ ಅವರು, ಕೋರ್ ಕಮಿಟಿ ಸದಸ್ಯರು, ಪದಾಧಿಕಾರಿಗಳು, ವಿಭಾಗ ಸಂಘಟನಾ ಕಾರ್ಯದರ್ಶಿಗಳು, ಪ್ರಭಾರಿ, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾ ಅಧ್ಯಕ್ಷರು, ವಿವಿಧ ಪ್ರಕೋಷ್ಠ ಅಧ್ಯಕ್ಷರು, ಶಾಸಕರು, ಸಂಸದರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರ ಜೊತೆ ಚರ್ಚೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಪಕ್ಷದ ವಕ್ತಾರ, ಶಾಸಕ ಸುರೇಶ್‍ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ 12 ರಂದು 10.30ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಮಿತ್ ಷಾ ಅವರನ್ನು ಪಕ್ಷದ ಪ್ರಮುಖರು ಟೋಲ್‍ಗೇಟ್‍ನಲ್ಲೇ ಭಾರೀ ಸ್ವಾಗತ ಕೋರಲಿದ್ದಾರೆ. ನಂತರ ಪಕ್ಷದ ಕಾರ್ಯಾಲಯದಲ್ಲಿ ಕಾರ್ಯಕರ್ತರಿಂದ ಸ್ವಾಗತ, ವಾಚನಾಲಯ ಉದ್ಘಾಟನೆ ಬಳಿಕ ಪ್ರಮುಖರೊಂದಿಗೆ ಸರಣಿ ಸಮಾಲೋಚನೆ ಸಭೆಗಳನ್ನು ನಡೆಸಲಿದ್ದಾರೆ ಎಂದರು. 13 ರಂದು ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಸಲಿದ್ದು, ತದನಂತರ ನಾಗಮಂಗಲದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆಯಲಿದ್ದಾರೆ.

ಬಳಿಕ ಪಕ್ಷದ ಕಚೇರಿಗೆ ಆಗಮಿಸಿ ವಿವಿಧ ವಿಭಾಗಗಳ ಮುಖ್ಯಸ್ಥರು ಪ್ರಕಲ್ಪಗಳ ಪ್ರಮುಖರೊಂದಿಗೆ ಚರ್ಚೆ ನಡೆಸಿ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ ಎಂದು ತಿಳಿಸಿದರು. 14 ರಂದು ವಿಸ್ತಾರಕರ ಜೊತೆ ಸಭೆ ನಡೆಸಿದ ಬಳಿಕ ಬಿಜೆಪಿ ಪಕ್ಷ ಜಯಗಳಿಸದ ಇರುವ ಸಂಸತ್ ಕ್ಷೇತ್ರಗಳ ಪ್ರಮುಖರೊಂದಿಗೆ ಸಮಾಲೋಚನೆ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ಪ್ರಕೋಷ್ಠಗಳ ನಿರ್ವಹಣಾ ತಂಡದೊಂದಿಗೆ ಭೇಟಿ, ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರೊಂದಿಗೆ ಚರ್ಚೆ, ಎಸ್ಸಿ-ಎಸ್ಟಿ, ಒಬಿಸಿ ಸೇರಿದಂತೆ ವಿವಿಧ ನಾಯಕರ ಜೊತೆ ಸರಣಿ ಸಭೆ ನಡೆಸಲಿದ್ದಾರೆ ಎಂದರು.

ತಾಲೂಕಿನಿಂದ ಜಿಲ್ಲಾಮಟ್ಟದವರೆಗೂ ಪ್ರತಿಯೊಬ್ಬ ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷದ ಸಂಘಟನೆ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಲಿದ್ದು, ಮುಂದಿನ ವಿಧಾನಸಭೆ ಚುನಾವಣೆಗೆ ನಮ್ಮ ಪಕ್ಷ ಸರ್ವಸನ್ನದ್ಧವಾಗಿದೆ ಎಂದು ಸುರೇಶ್‍ಕುಮಾರ್ ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರರು ಅನ್ವರ್ ಮಾನಪ್ಪಡಿ, ಸಹ ವಕ್ತಾರರಾದ ತೇಜಸ್ವಿನಿ, ಮಾಳವಿಕ, ಎಚ್.ಎ.ಆನಂದ್ ಸೇರಿದಂತೆ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin