ಐಟಿ ಅಧಿಕಾರಿಗಳೆದುರು ವಿಚಾರಣೆಗೆ ಹಾಜರಾದ ಡಿಕೆಶಿ, ಮತ್ತು ಆಪ್ತರು

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--015

ಬೆಂಗಳೂರು, ಆ.7-ಐಟಿ ದಾಳಿ ಹಿನ್ನೆಲೆಯಲ್ಲಿ ಸಮನ್ಸ್ ಪಡೆದಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯ ಎಸ್.ರವಿ, ಜ್ಯೋತಿಷಿ ದ್ವಾರಕನಾಥ್ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಯ ನಾಲ್ಕನೇ ಮಹಡಿಯಲ್ಲಿ ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದರು. ಮೊದಲೇ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದ ಐಟಿ ಅಧಿಕಾರಿಗಳು ಈ ನಾಲ್ವರಿಂದ ಉತ್ತರಗಳನ್ನು ಪಡೆಯುತ್ತಿದ್ದರು. ವಶಪಡಿಸಿಕೊಂಡ ದಾಖಲೆಗಳಿಗೆ ಉತ್ತರಗಳು ಹೊಂದಾಣಿಕೆ ಆಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು.

 

ಡಿಕೆಶಿ ನಿವಾಸ, ಕಚೇರಿ ಮತ್ತಿತರ ಕಡೆ ದಾಳಿ ನಡೆಸಿ ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿಗಳನ್ನು ಐಟಿ ಅಧಿಕಾರಿಗಳು ಡಿಕೆಶಿ ಅವರಿಂದ ಪಡೆದರು. ಆ.2ರಂದು ಡಿ.ಕೆ.ಶಿವಕುಮಾರ್ ಹಾಗೂ ಆಪ್ತರು, ಸಂಬಂಧಿಕರ ನಿವಾಸ, ಕಚೇರಿಗಳು ಸೇರಿದಂತೆ 69 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸದ ಮೇಲೆ ಸತತವಾಗಿ 72 ಗಂಟೆಗಳ ಕಾಲ ಐಟಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಮಹಜರ್ ಮಾಡಿ ಡಿಕೆಶಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು.

ಇದಲ್ಲದೆ ಡಿಕೆಶಿ ಆಪ್ತರ ನಿವಾಸಗಳ ಮೇಲೂ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದರು. ಡಿ.ಕೆ.ಶಿವಕುಮಾರ್ ಅವರ ಆಪ್ತರಾದ ಜ್ಯೋತಿಷಿ ದ್ವಾರಕನಾಥ್, ಸಚಿನ್ ನಾರಾಯಣ್, ಮಾವ ತಿಮ್ಮಯ್ಯ, ವಿನಯ್‍ಕಾರ್ತಿಕ್ ಅವರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದರು.  ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಲ್ಲರೂ ಅದಕ್ಕೆ ತಲೆ ಬಾಗಲೇಬೇಕು. ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಅದರಂತೆ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳ ಬಗ್ಗೆ ಸಮರ್ಪಕವಾಗಿ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.

ಐಟಿ ಕಚೇರಿಗೆ ತೆರಳುವಾಗಲೇ ಡಿಕೆಶಿಯವರು ಕೆಲ ಫೈಲ್‍ಗಳೊಂದಿಗೆ ತೆರಳಿದ್ದರು. ಹಲವು ಗಂಟೆಗಳ ಕಾಲ ದಾಖಲಾತಿಗಳ ಬಗ್ಗೆ ಪ್ರಶ್ನೆಗಳನ್ನು ಐಟಿ ಅಧಿಕಾರಿಗಳು ಡಿಕೆಶಿ ಅವರಿಗೆ ಕೇಳಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದರು. ವಿಚಾರಣೆಯ ಯಾವುದೇ ವಿವರಗಳು ಅಧಿಕೃತವಾಗಿ ಲಭ್ಯವಾಗಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಡಿಕೆಶಿ ಆಪ್ತರಾದ ಸಚಿನ್ ನಾರಾಯಣ್, ಡಿಕೆಶಿ ಮಾವ ತಿಮ್ಮಯ್ಯ ಇನ್ನೂ ಹಲವರಿಗೆ ಸಮನ್ಸ್ ಜಾರಿಗೊಳಿಸಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin