ಕೆಪಿಸಿಸಿಗೆ ನೂರು ಪದಾಧಿಕಾರಿಗಳ ಹೆಚ್ಚುವರಿ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

kpcc

ಬೆಂಗಳೂರು, ಆ.7-ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿಗೆ ನೂರು ಪದಾಧಿಕಾರಿಗಳನ್ನು ಹೆಚ್ಚುವರಿಯಾಗಿ ನೇಮಕ ಮಾಡಲು ಹೈಕಮಾಂಡ್ ತೀರ್ಮಾನಿಸಿರುವುದು ಆಕಾಂಕ್ಷಿಗಳ ಹುಮ್ಮಸ್ಸು ಹೆಚ್ಚಿಸಿದೆ. ಉಪಾಧ್ಯಕ್ಷರು, ಪ್ರಧಾನಕಾರ್ಯದರ್ಶಿ, ಕಾರ್ಯದರ್ಶಿ ಸೇರಿದಂತೆ ಪಕ್ಷದ ಹಲವು ಹುದ್ದೆಗಳನ್ನು ನೀಡಿ 170 ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಇದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು.  ಬೆಂಗಳೂರು ಕೇಂದ್ರೀಕೃತವಾಗಿ 100 ಹುದ್ದೆಗಳನ್ನು ನೀಡಲಾಗಿದ್ದು, ಕೇವಲ 70 ಹುದ್ದೆಗಳನ್ನು 30 ಜಿಲ್ಲೆಗಳಿಗೆ ನೀಡಲಾಗಿದ್ದು, ಆಕಾಂಕ್ಷಿಗಳಲ್ಲಿ ಅಸಮಾಧಾನ ಉಂಟು ಮಾಡಿತ್ತಲ್ಲದೆ, ನಾಯಕರ ಹಿಂಬಾಲಕರಿಗೆ ಮತ್ತು ನಿಗಮ ಮಂಡಳಿಗಳಲ್ಲಿ ಅಧ್ಯಕ್ಷರಾದವರಿಗೆ, ಮಾಜಿ ಶಾಸಕರಿಗೆ, ಹಾಲಿ ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಪಕ್ಷದ ಪದಾಧಿಕಾರಿಗಳ ಹುದ್ದೆ ನೀಡಲಾಗಿತ್ತು.

ಬಹುದಿನಗಳಿಂದ ಕಾರ್ಯಕರ್ತರಾಗಿ ದುಡಿದವರಿಗೆ ಯಾವುದೇ ಹುದ್ದೆ ನೀಡಿರಲಿಲ್ಲ. ಇದು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ ಹಲವು ಜಾತಿಗಳನ್ನು ಕೈಬಿಡಲಾಗಿತ್ತು.  ಪಕ್ಷ ಬಿಟ್ಟು ಹೊರಹೋದ ವಿಶ್ವಕರ್ಮ ಸಮುದಾಯದವರಿಗೆ ಪರ್ಯಾಯವಾಗಿ ಯಾವುದೇ ಆದ್ಯತೆಯನ್ನು ಪಕ್ಷದಲ್ಲಿ ನೀಡಿರಲಿಲ್ಲ. ಅದೇ ರೀತಿ ಯಾದವ ಸಮುದಾಯದವರಿಗೂ ಪಕ್ಷದಲ್ಲಿ ಯಾವುದೇ ಹುದ್ದೆ ನೀಡಿರಲಿಲ್ಲ. ಪ್ರಭಾವಿ ನಾಯಕರಾದ ಕುರುಬ ಸಮುದಾಯದ ಎಚ್.ವಿಶ್ವನಾಥ್ ಅವರು ಪಕ್ಷ ತೊರೆದಿದ್ದರೂ ಪರ್ಯಾಯವಾಗಿ ಅವರಷ್ಟೇ ಸಮರ್ಥರಾದ ಮತ್ತೊಬ್ಬ ನಾಯಕರಿಗೆ ಪಕ್ಷದಲ್ಲಿ ಯಾವ ಹುದ್ದೆಯೂ ದೊರೆತಿರಲಿಲ್ಲ. ಹೀಗಾಗಿ ಸಾಕಷ್ಟು ಅಸಮಾಧಾನ ಮೂಡಿತ್ತು.

ಇದಲ್ಲದೆ ಯಾವುದೇ ಪದಾಧಿಕಾರಿಗಳ ಹುದ್ದೆ ನೀಡುವಾಗ ಕೆಪಿಸಿಸಿ ಸದಸ್ಯರಾಗಿರಬೇಕು. ಈ ಬಾರಿ ಚುನಾವಣೆ ಹಿನ್ನೆಲೆಯಲ್ಲಿ ನೇರವಾಗಿ ಪದಾಧಿಕಾರಿಗಳ ಹುದ್ದೆ ನೀಡಲಾಗಿದೆ. ಕೆಪಿಸಿಸಿ ಸದಸ್ಯರಲ್ಲದ ಬಹುತೇಕ ಮಂದಿ ಪದಾಧಿಕಾರಿಗಳಾಗಿದ್ದಾರೆ. ಇದೂ ಕೂಡ ಅಸಮಾಧಾನಕ್ಕೆ ಕಾರಣವಾಗಿದೆ. ಅತೃಪ್ತಿ, ಅಸಮಾಧಾನ, ಭಿನ್ನಾಭಿಪ್ರಾಯ ಒಳಗೊಳಗೇ ಕುದಿಯುತ್ತಿದ್ದು, ಪಕ್ಷ ಮುನ್ನಡೆಸಲು ಅಡ್ಡಿಯಾಗುತ್ತಿದೆ. ಹಾಗಾಗಿ ಹೆಚ್ಚುವರಿಯಾಗಿ ಪದಾಧಿಕಾರಿಗಳನ್ನು ನೇಮಕ ಮಾಡಲು ತೀರ್ಮಾನಿಸಲಾಗಿದ್ದು, ಮತ್ತೊಂದು ಪಟ್ಟಿ ಸಿದ್ಧವಾಗುತ್ತಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಮುಖಂಡರು, ದಕ್ಷಿಣ ಕರ್ನಾಟಕ, ಕರಾವಳಿ ಭಾಗ, ಚಿತ್ರದುರ್ಗ, ಬಯಲುಸೀಮೆ, ಲಿಂಗಾಯತ, ಒಕ್ಕಲಿಗ ಸಮುದಾಯ ಸೇರಿದಂತೆ ಎಲ್ಲಾ ಮುಖಂಡರು ಸೇರಿ ಜಾತಿವಾರು, ಪ್ರಾಂತ್ಯವಾರು ಆದ್ಯತೆ ಸಿಗುವಂತೆ ನೋಡಿಕೊಂಡು ಮತ್ತೊಂದು ಹೆಚ್ಚುವರಿ ಪಟ್ಟಿ ಸಿದ್ದಪಡಿಸಿ ಹೈಕಮಾಂಡ್ ಅನುಮತಿ ಪಡೆದು ಪದಾಧಿಕಾರಿಗಳ ನೇಮಕ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪಟ್ಟಿ ಸಿದ್ಧವಾದರೆ 270ಕ್ಕೂ ಪದಾಧಿಕಾರಿಗಳ ತಂಡ ಚುನಾವಣೆಗೆ ರೆಡಿಯಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin