ಭ್ರಷ್ಟಾಚಾರ, ದುರ್ನಡತೆಯ ತೋರಿದ 31 ಅಧಿಕಾರಿಗಳ ಕ್ರಮಕ್ಕೆ ವಿರುದ್ಧ ಲೋಕಾಯುಕ್ತ ಶಿಫಾರಸು

Karnataka-lokayukta

ಬೆಂಗಳೂರು, ಆ.7- ಸರ್ಕಾರಿ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದೆ ದುರ್ನಡತೆ ತೋರಿಸುವ ಮತ್ತು ಭ್ರಷ್ಟಾಚಾರ ಮಾಡಿದ 31 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಜ.28ರಂದು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಸುಮಾರು 6500 ದೂರುಗಳು ಬಾಕಿ ಇದ್ದವು. ತಾವು ಲೋಕಾಯುಕ್ತರಾದ ನಂತರ ಸಾರ್ವಜನಿಕರಿಂದ ಬರುವ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಯಾವುದೇ ದೂರು ಬಂದರೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ದೂರಿನ ಸತ್ಯಾಸತ್ಯತೆ ಆಧರಿಸಿ ಮತ್ತು ಲೋಕಾಯುಕ್ತ ಅಧಿಕಾರಿಗಳ ವಿಚಾರಣಾ ವರದಿಯನ್ನು ಜತೆಗೂಡಿಸಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫರಾಸು ಮಾಡಲಾಗುತ್ತಿದೆ ಎಂದರು. ಈವರೆಗೂ 32 ವಿಚಾರಣಾ ವರದಿಗಳು ಬಂದಿದ್ದು, ಅವುಗಳಲ್ಲಿ 31 ವರದಿಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದೆ. ಇನ್ನು ಒಂದು ವಿಚಾರಣಾ ವರದಿ ಸರ್ಕಾರಕ್ಕೆ ಕಳುಹಿಸಿವುದು ಬಾಕಿ ಇದೆ ಎಂದರು.

ಲೋಕಾಯುಕ್ತಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಗತ್ಯ:

ಭ್ರಷ್ಟಾಚಾರ ನಿಗ್ರಹ ಕಾಯ್ದೆ ಜಾರಿಗೊಳಿಸುವ ಅಧಿಕಾರ ಲೋಕಾಯುಕ್ತ ಸಂಸ್ಥೆಯ ಅಧೀನದಲ್ಲಿದಿದ್ದರೆ ಅಧಿಕಾರಿ ವರ್ಗದಲ್ಲಿ ಭಯ ಇರುತ್ತಿತ್ತು. ಯಾವ ಸಂದರ್ಭದಲ್ಲಾದರೂ ದಾಳಿ ನಡೆಯಬಹುದೆಂಬ ಆತಂಕ ಅಧಿಕಾರಿಗಳಿಗೆ ಇದಿದ್ದರೆ ಲೋಕಾಯುಕ್ತ ಸಂಸ್ಥೆಯ ಆಸೆ ಫಲಿಸುತ್ತಿತ್ತು. ಸರ್ಕಾರ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಜಾರಿಗೊಳಿಸುವ ಅಧಿಕಾರವನ್ನು ಬೇರ್ಪಡಿಸಿ ಸರ್ಕಾರ ಎಸಿಬಿ ಸ್ಥಾಪಿಸಿದ್ದರಿಂದ ಲೋಕಾಯುಕ್ತ ಸಂಸ್ಥೆಗೆ ಹಿನ್ನೆಡೆಯಾಗಿದೆ ಎಂದು ನಾನು ಭಾವಿಸುವುದಿಲ್ಲ. ಲೋಕಾಯುಕ್ತ ಸಂಸ್ಥೆಗೆ ತಪ್ಪು ಮಾಡುವ ಅಧಿಕಾರಿಗಳನ್ನು ದಂಡಿಸುವ ಅಧಿಕಾರದ ಅಗತ್ಯ ಇದೆ. ಇದಕ್ಕೆ ಅಲ್ಪಸ್ವಲ್ಪ ಬದಲಾವಣೆ ಮಾಡಿ ಕಾಯ್ದೆ ರೂಪಿಸಿದರೆ ಸಾಧ್ಯವಾಗಲಿದೆ ಎಂದರು.

ತಾವು ಇಲ್ಲದೇ ಇರುವ ಅಧಿಕಾರಕ್ಕಾಗಿ ಜಗಳವಾಡುತ್ತಾ ಕೂರುವುದಿಲ್ಲ. ಇರುವ ಅಧಿಕಾರವನ್ನು ಸರಿಯಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ನನ್ನ ಮಾತುಗಳು ಮೃದು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ನಾನು ಯಾರಿಗೂ ಮಾತಿನಲ್ಲಿ ಮಾನ ಹಾನಿ ಮಾಡಲು ಬಯಸುವುದಿಲ್ಲ. ಬದಲಾಗಿ ಕಾಗದದ ಮೇಲೆ ಕೆಲಸ ಮಾಡುತ್ತೇನೆ. ಪೆನ್ನಿನಲ್ಲಿ ಬರೆಯುವ ಮೂಲಕ ತಕ್ಕ ಸಾಸ್ತಿ ಮಾಡುತ್ತೇನೆ ಎಂದು ಹೇಳಿದರು. ಲೋಕಾಯುಕ್ತ ಸಂಸ್ಥೆ ಅಬ್ಬರದ ಪ್ರಚಾರ ಪಡೆದುಕೊಂಡು ಒಂದಿಬ್ಬರನ್ನು ಜೈಲಿಗೆ ಹಾಕಿಸಿದಾಕ್ಷಣ ಎಲ್ಲವೂ ಸರಿಹೋಗುವುದಿಲ್ಲ. ಇರುವ ಅಧಿಕಾರವನ್ನು ಬಳಸಿಕೊಂಡು ಕೆಲಸ ಮಾಡಬೇಕಿದೆ. ಎಸಿಬಿ, ಸಿಐಡಿ, ಸಿಬಿಐ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ಬಳಸಿಕೊಂಡು ತನಿಖೆ ಮಾಡಿಸುವ ಅಧಿಕಾರ ನಮಗಿದೆ. ಜತೆಗೆ ಲೋಕಾಯುಕ್ತದಲ್ಲೇ ಪೊಲೀಸ್ ವ್ಯವಸ್ಥೆ ಇದೆ. ಅದನ್ನೂ ಬಳಸಿಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತಕ್ಕೆ ಬಂದ ದೂರುಗಳನ್ನು ಎಸಿಬಿಗೆ ರವಾನಿಸಲಾಗಿದೆ. ಒಂದೆರಡು ಪ್ರಕರಣಗಳಲ್ಲಿ ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಸಿಬಿಐ ತನಿಖೆ ಮಾಡಿಸಬೇಕಾದರೆ ಸರ್ಕಾರದ ಅನುಮತಿ ಬೇಕು. ಉಳಿದಂತೆ ಯಾವುದೇ ಸಂಸ್ಥೆಯ ನೆರವನ್ನು ಪಡೆದುಕೊಳ್ಳಲು ಅವಕಾಶವಿದೆ. ಆ ಅಧಿಕಾರವನ್ನು ಚಲಾಯಿಸುತ್ತೇನೆ ಎಂದು ಹೇಳಿದರು.

ಲೋಕಾಯುಕ್ತ ದುರುಪಯೋಗಕ್ಕೆ ಅವಕಾಶ ಕೊಡುವುದಿಲ್ಲ:

ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಲೋಕಾಯುಕ್ತ ಸಂಸ್ಥೆಯ ಪ್ರಗತಿ ಪರಿಶೀಲನೆ ನಡೆಸಿ ಬಿಜೆಪಿ ನಾಯಕರ ವಿರುದ್ಧ ಇರುವ ಭ್ರಷ್ಟಾಚಾರ ಪ್ರಕರಣಗಳ ಮಾಹಿತಿ ಪಡೆದಿದ್ದಾರೆ ಎಂಬ ಆರೋಪವನ್ನು ವಿಶ್ವನಾಥಶೆಟ್ಟಿ ತಳ್ಳಿ ಹಾಕಿದರು. ನಾನು ಅಧಿಕಾರ ವಹಿಸಿಕೊಂಡ ಮೇಲೆ ನಿನ್ನೆಯಷ್ಟೇ ನ್ಯಾಷನಲ್ ಲಾ ಕಾಲೇಜಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮುಖ ನೋಡಿದ್ದೇನೆ. ಈವರೆಗೂ ಮುಖ್ಯಮಂತ್ರಿಯವರು ಲೋಕಾಯುಕ್ತದ ಪ್ರಗತಿ ಪರಿಶೀಲನೆ ಮಾಡಿಲ್ಲ. ತಮ್ಮ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲು ಯಾರಿಗೂ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.

ಜನಪ್ರತಿನಿಧಿಗಳಿಗೆ ಲೋಕಾಯುಕ್ತ ಸಂಸ್ಥೆಯೇ ಸರಿಯಾಗಿದೆ. ಅಧಿಕಾರಿ ವರ್ಗಕ್ಕೆ ಎಸಿಬಿ ಸೂಕ್ತ ಎಂದು ಹೇಳಿದ ಅವರು, ಜನಪ್ರತಿನಿಧಿಗಳು ಜೂ.30ರೊಳಗೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕಿತ್ತು. ಬಹುತೇಕ ಮಂದಿ ಸಲ್ಲಿಸಿದ್ದಾರೆ. ಒಂದಿಬ್ಬರು ಸಲ್ಲಿಸಿಲ್ಲ. ಅಂತಹವರಿಗೆ ಸೂಕ್ತ ತಿಳುವಳಿಕೆ ನೀಡಲಾಗಿದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin