ಮೇಯರ್ ಕಪ್ ವಾಲಿಬಾಲ್ : ಬೆಂಗಳೂರು ಮಹಿಳೆಯರು ದ್ವಿತೀಯ

ಈ ಸುದ್ದಿಯನ್ನು ಶೇರ್ ಮಾಡಿ

Mayor-Cup

ಬೆಂಗಳೂರು, ಆ.7- ಸುವರ್ಣ ವರ್ಷದ ಅಂಗವಾಗಿ ರಾಮಮಂದಿರ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೇಯರ್ ಕಪ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಚನೈನ ಐಒಬಿ ತಂಡ ಮೊದಲ ಸ್ಥಾನ ಪಡೆದುಕೊಂಡು 4ಲಕ್ಷ ರೂ.ಗಳ ಬಹುಮಾನ ತನ್ನದಾಗಿಸಿಕೊಂಡಿದೆ. ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ಪಂಜಾಬ್ ಪೊಲೀಸ್ ತಂಡವನ್ನು 3.0 ಸೆಟ್‍ಗಳ ಅಂತರದಿಂದ ಮಣಿಸಿದ ಐಒಬಿ ತಂಡದವರು, ಮೊದಲ ಸ್ಥಾನ ಪಡೆದುಕೊಂಡರು. ಎಪ್ಪತ್ತೈದು ನಿಮಿಷಗಳ ಹೋರಾಟದಲ್ಲಿ ಐಒಬಿ ತಂಡದವರು 27-25, 25-22 ಮತ್ತು 26-24 ಅಂತರದಿಂದ ಪಂಜಾಬ್ ತಂಡವನ್ನು ಮಣಿಸಿದರು.

ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಪಂಜಾಬ್ ಪೊಲೀಸ್ ತಂಡ 3 ಲಕ್ಷ ನಗದು ಹಾಗೂ ಚನ್ನೈನ ಎಸ್‍ಆರ್‍ಎಂ ಯೂನಿವರ್‍ಸಿಟಿ ಮೂರನೇ ಪ್ರಶಸ್ತಿಯೊಂದಿಗೆ 2 ಲಕ್ಷ ನಗದು ಬಹುಮಾನ ಹಾಗೂ ಹರಿಯಾಣದ ಎಚ್‍ಎಸ್‍ಐಐಡಿಸಿ ತಂಡ ನಾಲ್ಕನೆ ಪ್ರಶಸ್ತಿಯೊಂದಿಗೆ ಒಂದು ಲಕ್ಷ ರೂ. ಪಡೆದುಕೊಂಡಿತು. ಪಂಜಾಬ್‍ನ ಗುರಿಂಧರ್‍ಸಿಂಗ್ ಉತ್ತಮ ಅಟ್ಯಾಕರ್, ಐಒಬಿಯ ವೈಷ್ಣವ್ ಉತ್ತಮ ಬ್ಲಾಕರ್, ಎಸ್‍ಆರ್‍ಎಂ ತಂಡದ ಅಥೇಶ್ವರನ್ ಉತ್ತಮ ಸೆಟ್ಟರ್ ಹಾಗೂ ಐಒಬಿಯ ಮಿಥುನ್‍ಕುಮಾರ್ ಲಿಬೆರೋ ವೈಯಕ್ತಿಕ ಪ್ರಶಸ್ತಿಗೆ ಪಾತ್ರರಾಗಿ ತಲಾ 25 ಸಾವಿರ ರೂ.ಗಳ ನಗದು ಬಹುಮಾನ ಕಿಸೆಗಿಳಿಸಿದರು.

ಅದೇ ರೀತಿ ಮಹಿಳಾ ತಂಡಗಳ ನಡುವೆ ನಡೆದ ಅಂತಿಮ ಹಣಾಹಣಿಯಲ್ಲಿ ಚನ್ನೈ ಕ್ವೀನ್ಸ್ ತಂಡದವರು ಬೆಂಗಳೂರು ಸಿಟಿ ತಂಡವನ್ನು ಮಣಿಸಿ ಮೊದಲ ಪ್ರಶಸ್ತಿಗೆ ಭಾಜನರಾಗಿ ಎರಡೂವರೆ ಲಕ್ಷ ನಗದು ಬಹುಮಾನ ಪಡೆದುಕೊಂಡರೆ, ಬೆಂಗಳೂರು ತಂಡದವರು ಒಂದೂವರೆ ಲಕ್ಷ ರೂ. ಬಹುಮಾನದೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಬೆಂಗಾಲ್ ಟೈಗರ್ಸ್ 3 ಹಾಗೂ ಹಿಮಾಲಯನ್ ಕ್ವೀನ್ಸ್ ನಾಲ್ಕನೆ ಸ್ಥಾನದೊಂದಿಗೆ ಕ್ರಮವಾಗಿ 1ಲಕ್ಷ ಹಾಗೂ 50ಸಾವಿರ ನಗದು ಬಹುಮಾನ ತಮ್ಮದಾಗಿಸಿಕೊಂಡರು.

ಒಂದು ಗಂಟೆ ಕಾಲ ಕಳೆದ ಸಿಎಂ:

ರಾಜಕೀಯ ಒತ್ತಡಗಳ ನಡುವೆಯೂ ರಾಮಮಂದಿರ ಆಟದ ಮೈದಾನಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಗಂಟೆಗೂ ಹೆಚ್ಚು ಕಾಲ ವಾಲಿಬಾಲ್ ಪಂದ್ಯ ವೀಕ್ಷಿಸಿ ಖುಷಿಪಟ್ಟರು.ಇದೇ ಸಂದರ್ಭದಲ್ಲಿ ಮೇಯರ್ ಜಿ.ಪದ್ಮಾವತಿ ಅವರು ಮುಖ್ಯಮಂತ್ರಿಗಳಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.

ಡಿಕೆಶಿ ಮಿಂಚು:

ಇನ್ನೇನು ಅಂತಿಮ ಸುತ್ತಿನ ಪಂದ್ಯಾವಳಿ ಪೂರ್ಣಗೊಳ್ಳಲಿದೆ ಎಂಬ ಸಮಯಕ್ಕೆ ಸರಿಯಾಗಿ ಡಿ.ಕೆ.ಶಿವಕುಮಾರ್ ಆಗಮನವಾಯಿತು. ಡಿಕೆಶಿ ಬರುವ ಕೇವಲ 5 ನಿಮಿಷಗಳ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಂಗಣ ತೊರೆದಿದ್ದರು. ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದ ಡಿ.ಕೆ.ಶಿವಕುಮಾರ್ ಅವರು, ತಾವು ಬಾಲ್ಯದಲ್ಲಿದ್ದಾಗ ಇದೇ ಕ್ರೀಡಾಂಗಣದಲ್ಲಿ ಆಟವಾಡುತ್ತಿದುದ್ದನ್ನು ಸ್ಮರಿಸಿಕೊಂಡರು.

ಮೇಯರ್ ಜಿ.ಪದ್ಮಾವತಿ ಅವರು ಈ ಭಾಗದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ನೀವು ಬುನಾದಿಗಳಾಗಬೇಕೆಂದು ಪರೋಕ್ಷವಾಗಿ ಪದ್ಮಾವತಿ ರಾಜಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ಎಂಬುದನ್ನು ಘೋಷಿಸಿದರು. ಮೇಯರ್ ಜಿ.ಪದ್ಮಾವತಿ ಮಾತನಾಡಿ, ಯುವಕರಲ್ಲಿ ಕ್ರೀಡಾ ಮನೋಭಾವ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು ಎಂದರು. ಶಾಸಕರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಮಾಜಿ ಮೇಯರ್ ಮಂಜುನಾಥರೆಡ್ಡಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin