44 ಗುಜರಾತ್ ಶಾಸಕರು ಬೆಂಗಳೂರಿನಿಂದ ತವರಿಗೆ ಶಿಫ್ಟ್

Gujarat-MA

ಅಹಮದಾಬಾದ್, ಆ.7-ಆಪರೇಷನ್ ಕಮಲ ಕಾರ್ಯಾಚರಣೆ ಆತಂಕದಿಂದ ಬೆಂಗಳೂರು ಸಮೀಪದ ಬಿಡದಿಯಲ್ಲಿ ಠಿಕಾಣಿ ಹೂಡಿದ್ದ ಗುಜರಾತ್‍ನ 44 ಕಾಂಗ್ರೆಸ್ ಶಾಸಕರು ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತವರೂರಿಗೆ ಹಿಂದಿರುಗಿದ್ದಾರೆ. ಈ ಶಾಸಕರೆಲ್ಲರನ್ನೂ ಆನಂದ್ ಜಿಲ್ಲೆಯ ರೆಸಾರ್ಟ್ ಒಂದಕ್ಕೆ ಕರೆದೊಯ್ಯಲಾಗಿದೆ.  ಗುಜರಾತ್‍ನಲ್ಲಿ ನಾಳೆ ನಡೆಯಲಿರುವ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಧುರೀಣ ಅಹಮದ್ ಪಟೇಲ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಪಟೇಲ್ ಹಣೆಬರಹ ನಾಳೆ ನಿರ್ಧರವಾಗಲಿದೆ. ನಮ್ಮ ಎಲ್ಲ ಶಾಸಕರು ಬೆಂಗಳೂರಿನಿಂದ ಹಿಂದಿರುಗಿದ್ಧಾರೆ ಹಾಗೂ ಅವರನ್ನು ಆನಂದ ಜಿಲ್ಲೆಯ ರೆಸಾರ್ಟ್ ಒಂದಕ್ಕೆ ಕರೆದೊಯ್ಯಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಮತ್ತು ಹಿರಿಯ ನಾಯಕ ಶೈಲೇಶ್ ಪಾರ್ಮರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬೆಂಗಳೂರಿನಿಂದ ಅಹಮದಾಬಾದ್ ಏರ್‍ಪೋರ್ಟ್‍ಗೆ ಬಂದಿಳಿದ ಶಾಸಕರನ್ನು ಕೂಡಲೇ ಆನಂದ ಪಟ್ಟಣದ ಹೊರವಲಯದಲ್ಲಿರುವ ನಿಜಾನಂದ್ ರೆಸಾರ್ಟ್‍ಗೆ ಕರೆದೊಯ್ದು ಅಲ್ಲಿ ಹೊರಗಿನ ಸಂಪರ್ಕ ಇಲ್ಲದಂತೆ ಇರಿಸಲಾಗಿದೆ.  ಇಂದು ರಕ್ಷಾಬಂಧನ್. ಆದರೂ ಕೂಡ ನಮ್ಮ ಎಲ್ಲ ಶಾಸಕರು ತಮ್ಮ ಊರುಗಳಿಗೆ ಹೋಗದಿರಲು ನಿರ್ಧರಿಸಿದ್ದಾರೆ ಹಾಗೂ ಅವರೆಲ್ಲರೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೇವಕರಾಗಿದ್ದಾರೆ. ಇವರೆಲ್ಲರೂ ಇಲ್ಲಿ ಒಟ್ಟಿಗೆ ವಾಸ್ತವ್ಯ ಹೂಡಿ ನಾಳೆ ಗಾಂಧಿನಗರದಲ್ಲಿ ನಡೆಯಲಿರುವ ರಾಜ್ಯಸಭೆ ಚುಣಾವಣೆಗೆ ಮತ ಚಲಾಯಿಸಲಿದ್ದಾರೆ ಎಂದು ಪಾರ್ಮರ್ ಹೇಳಿದ್ದಾರೆ.

ಅಹಮದ್ ಪಟೇಲ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿನ್ಹಾ ಸೋಳಂಕಿ ಅವರು ಇಂದು ಆನಂದ್‍ಗೆ ಧಾವಿಸಿ ಈ ಶಾಸಕರನ್ನು ಭೇಟಿ ಮಾಡಲಿದ್ದಾರೆ. ರಾಜ್ಯ ಸಭೆಯ ಮೂರು ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸ್ಮತಿ ಇರಾನಿ ಮತ್ತು ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾದ ಬಲವಂತ್ ಸಿನ್ಹಾ ರಜಪೂತ್ ವಿರುದ್ಧ ಅಹಮದ್ ಪಟೇಲ್ ಕಣದಲ್ಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin