ಗುಜರಾತ್ ನಲ್ಲಿ ಹೈಡ್ರಾಮಾ : ಮತ ಎಣಿಕೆ ವಿಳಂಬ, ಕುತೂಹಲ ಕೆರಳಿಸಿದ ಫಲಿತಾಂಶ

Gujarat--01

ನವದೆಹಲಿ, ಆ.8- ಗುಜರಾತ್ ನಿಂದ ರಾಜ್ಯಸಭೆಯ 3 ಸ್ಥಾನಗಳ ಆಯ್ಕೆಗೆ ಮತದಾನ ನಡೆದಿದ್ದು, ಎ.ಐ.ಸಿ.ಸಿ. ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಗೆಲುವಿನ ಕುರಿತಾಗಿ ಕುತೂಹಲ ಮೂಡಿದೆ. ಕಾಂಗ್ರೆಸ್ ನ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿದ್ದು, 3 ನೇ ಅಭ್ಯರ್ಥಿ ಬಲವಂತ್ ಸಿಂಗ್ ರಜಪೂತ್, ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಗೆಲುವು ನಿಶ್ಚಿತವೆನ್ನಲಾಗಿದೆ.

ಈಗ ಗುಜರಾತ್ ರಾಜ್ಯಸಭಾ ಚುನಾವಣೆ ಕ್ಷಣಕ್ಷಣಕ್ಕೂ ಕುತೂಹಲ ಹುಟ್ಟಿಸುತ್ತಿದ್ದು, ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಇವರ ಮತಗಳನ್ನು ರದ್ದುಪಡಿಸಬೇಕು ಎಂದು ಕಾಂಗ್ರೆಸ್ ಬಿಗಿ ಪಟ್ಟು ಹಿಡಿದಿದೆ. ಇದರಿಂದ ಮತ ಎಣಿಕೆ ವೇಳೆ ಗುಜರಾತ್ ನಲ್ಲಿ ಹೈಡ್ರಾಮಾವೇ ನಡೆಯುತ್ತಿದೆ.
ಈ ನಡುವೆ ಅಡ್ಡ ಮತದಾನ ಮಾಡಿರುವ ಇಬ್ಬರು ಶಾಸಕರ ಮತಗಳನ್ನು ಪರಿಗಣಿಸಬಾರದೆಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮಾಡಿದ್ದ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಮತಎಣಿಕೆಯನ್ನು ಸದ್ಯ ತಡೆಹಿಡಿಯಲಾಗಿದ್ದು ಫಲಿತಾಂಶ ಮತ್ತಷ್ಟು ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್, ತಾವು ಗೆಲ್ಲುವ ಭರವಸೆ ಹೊಂದಿದ್ದರೂ 44 ಶಾಸಕರಲ್ಲಿ ಇಬ್ಬರು ಅಡ್ಡ ಮತದಾನ ಮಾಡಿದ್ದಾರೆ. ಇದರಿಂದ ಕೈ ಪಾಳಯದಲ್ಲಿ ತೀವ್ರ ಆತಂಕ ಉಂಟಾಗಿದೆ. ಅಹಮ್ಮದ್ ಪಟೇಲ್ ಗೆಲ್ಲಲು ಕನಿಷ್ಟ 45 ಮತಗಳ ಅಗತ್ಯವಿದೆ. ಕಾಂಗ್ರೆಸ್ 44 ಸದಸ್ಯಬಲ ಹೊಂದಿದ್ದು, 1 ಮತದ ಕೊರತೆ ಇದೆ. ಈ ಸನ್ನಿವೇಶದಲ್ಲೇ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿದ್ದು. ಅಹಮ್ಮದ್ ಪಟೇಲ್ ಗೆಲುವು ಡೋಲಾಯಮಾನ ಸ್ಥಿತಿಯಲ್ಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.

ಎಐಸಿಸಿ ಕಚೇರಿಯಲ್ಲಿ ಸೋನಿಯಾ ತುರ್ತುಸಭೆ :
ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ತುರ್ತುಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದರು. ಅನಾರೋಗ್ಯದಿಂದಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಭೆಗೆ ಗೈರುಹಾಜರಾಗಿದ್ದರು. ಒಟ್ಟಿನಲ್ಲಿ ಗುಜರಾತ್ ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಮತದಾನದ ವಿಡಿಯೋವನ್ನು ಗುಜರಾತ್ ಚುನಾವಣೆ ಆಯೋಗದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಕೇಂದ್ರ ಚುನಾವಣೆ ಆಯೋಗಕ್ಕೆ ವರದಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Facebook Comments

Sri Raghav

Admin