ಡಿ.ಕೆ.ಶಿವಕುಮಾರ್’ಗೆ ಎದುರಾಯ್ತು ಮತ್ತೊಂದು ಕಾನೂನು ಸಂಕಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ನವದೆಹಲಿ, ಆ.8-ಸರಣಿ ಐಟಿ ದಾಳಿಗೆ ಒಳಗಾಗಿ ತೀವ್ರ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಬೆನ್ನಿಗಾನಹಳ್ಳಿ ಡಿನೋಟಿಫೈ ಪ್ರಕರಣದ ವಿಚಾರಣೆಯನ್ನು ಆ.29ರಂದು ಸುಪ್ರೀಂ ಕೋರ್ಟ್ ನಡೆಸಲಿದೆ.  ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಸುಪ್ರೀಂಕೋರ್ಟ್‍ನಲ್ಲಿ ಈ ಸಂಬಂಧ ವಿಶೇಷ ಮೇಲ್ಮನವಿ ಸಲ್ಲಿಸಿ ಪ್ರಕರಣವನ್ನು ಮರು ವಿಚಾರಣೆಗೆ ಒಳಪಡಿಸುವಂತೆ ಕೋರಿದ್ದರು.

ಇಂದು ಈ ವಿಶೇಷ ಮೇಲ್ಮನವಿ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್, ಈ ಪ್ರಕರಣದ ವಿಚಾರಣೆಯನ್ನು ಆ.29ರಂದು ತ್ರಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ ಎಂದು ತಿಳಿಸಿದರು. ಇದರೊಂದಿಗೆ ಡಿನೋಟಿಫೈ ಪ್ರಕರಣಕ್ಕೆ ಮರು ಜೀವ ಬಂದಿದ್ದು, ಡಿಕೆಶಿ ಅವರಿಗೆ ಮತ್ತೊಂದು ಕಂಟಕ ಕೊರಳು ಸುತ್ತಿಕೊಳ್ಳುತ್ತಿದೆ.  ಹೈಕೋರ್ಟ್ ತಡೆಯಾಜ್ಞೆ  ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‍ನ ಪೀಠವು ಹೈಕೋರ್ಟ್‍ನಲ್ಲಿಯೇ ಈ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿತ್ತು. ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ನ್ಯಾಯಪೀಠ ಕಳೆದ ಡಿಸೆಂಬರ್ 18ರಂದು ಈ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಬ್ರಹಾಂ ಮೇಲ್ಮನವಿ ಸಲ್ಲಿಸಿದ್ದರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಾಸಕರಾಗಿದ್ದ ಡಿ.ಕೆ.ಶಿವಕುಮಾರ್ ಇಂದಿರಾನಗರ ಸಮೀಪದ ಬೆನ್ನಿಗಾನಹಳ್ಳಿಯ ನಾಲ್ಕೂವರೆ ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿಸಿಕೊಂಡು ಬೇರೆಯವರಿಗೆ ಪರಭಾರೆ ಮಾಡಿದ್ದಾರೆ ಎಂದು ಅಬ್ರಹಾಂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಪ್ರಕರಣದ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಬಿ ರಿಪೋರ್ಟ್  ಹಾಕಿದ್ದನ್ನು ಪ್ರಶ್ನಿಸಿ ಅಬ್ರಹಾಂ ಹೈಕೋರ್ಟ್ ಮೊರೆ ಹೋಗಿದ್ದರು. ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ವಜಾಗೊಂಡ ನಂತರ ಅವರು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

Facebook Comments

Sri Raghav

Admin