ಬಿಬಿಎಂಪಿಯಲ್ಲಿ ಚಮತ್ಕಾರ, ಇಲ್ಲಿ ನಿವೃತ್ತಿ ನಂತರವೂ ಸಿಗುತ್ತೆ ವೇತನ..!

ಈ ಸುದ್ದಿಯನ್ನು ಶೇರ್ ಮಾಡಿ

bbmp2

ಬೆಂಗಳೂರು, ಆ.8- ಈಯಮ್ಮನ ಹೆಸರು ಕನ್ನಗಿ. ಮಾಡುತ್ತಿದ್ದದ್ದು ಪೌರಕಾರ್ಮಿಕ ಉದ್ಯೋಗ. ನಿವೃತ್ತಿಯಾಗಿದ್ದು 2016ರಲ್ಲಿ. ಆದರೂ, 2017ರಲ್ಲೂ ವೇತನ ಪಡೆದಿದ್ದಾರೆ. ಹೇಗೆ ಅಂತೀರಾ…? ಅದೇ ಬಿಬಿಎಂಪಿ ಚಮತ್ಕಾರ…! ಹೊಂಬೇಗೌಡನಗರ ಎಇಇ ಕಚೇರಿಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ (ಬಿಲ್ಲೆ ಸಂಖ್ಯೆ: 6239/ಸಿ) ಕನ್ನಗಿ 2016ರ ಮೇ ತಿಂಗಳಿನಲ್ಲಿ ನಿವೃತ್ತಿಗೊಂಡಿದ್ದರು. ನಿವೃತ್ತಿನಂತರ ಇವರಿಗೆ ದೊರಕಬೇಕಾದ ಎಲ್ಲಾ ಸವಲತ್ತುಗಳು ದೊರೆತಿವೆ. ಆದರೂ ಕನ್ನಗಿ 2017ರ ಮೇ ಯಿಂದ ಜುಲೈ ತಿಂಗಳವರೆಗೂ ಮೂರು ತಿಂಗಳ ಸಂಬಳ ಪಡೆದಿದ್ದಾರೆ. ನಿವೃತ್ತಿಯಾದ ಒಂದು ವರ್ಷದ ನಂತರ ಕನ್ನಗಿ ಮತ್ತೆ ಹೇಗೆ ವೇತನ ಪಡೆದರು ಎಂಬುದು ಯಕ್ಷಪ್ರಶ್ನೆಯಾಗಿದೆ.

ಈ ವಿಚಾರ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿದಿದ್ದರೂ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಪಂಚದ ಯಾವುದೇ ಮೂಲೆಯಲ್ಲೂ ಸಂಭವಿಸದಂತಹ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುವುದು ಬಿಬಿಎಂಪಿಯಲ್ಲಿ ಮಾತ್ರ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿರುತ್ತವೆ. ಇದಕ್ಕೆ ಪುಷ್ಠಿ ನೀಡುವಂತೆ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಕನ್ನಗಿ ಪ್ರಕರಣ ಇಂತಹ ಒಂದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕನ್ನಗಿ ಅವರು 2016ರಲ್ಲಿ ನಿವೃತ್ತಿಯಾಗಿರುವುದು ನಂತರದ ಸೌಲಭ್ಯ ಪಡೆದಿರುವುದು ಹಾಗೂ 2017ರ ಮೇಯಿಂದ ಜುಲೈವರೆಗೂ ಮತ್ತೆ ವೇತನ ಪಡೆದಿರುವ ದಾಖಲೆ ಪತ್ರಿಕೆಗೆ ಲಭ್ಯವಾಗಿದೆ. ಯಾರದೋ ದಾಖಲೆ ಮೇಲೆ ಪೌರಕಾರ್ಮಿಕರಾಗಿ ಮತ್ಯಾರೋ ಸೇವೆ ಸಲ್ಲಿಸುತ್ತಿರುವುದು. ಮೃತಪಟ್ಟವರ ಹೆಸರಿನಲ್ಲಿ ವೇತನ ಪಡೆಯುತ್ತಿರುವುದು, ಕೆಲಸಕ್ಕೆ ಬಾರದೆ ಮನೆಯಲ್ಲೇ ಕುಳಿತು ತಿಂಗಳಿಗೊಮ್ಮೆ ಪಗಾರ ಪಡೆದುಕೊಳ್ಳುವ ಅದೆಷ್ಟೋ ಭ್ರಷ್ಟಾಚಾರಿಗಳು ಇಂದಿಗೂ ಬಿಬಿಎಂಪಿಯಲ್ಲಿದ್ದಾರೆ.

ಇದೀಗ ವರ್ಷದ ಹಿಂದೆ ನಿವೃತ್ತಿಯಾದ ಮಹಿಳೆಯೊಬ್ಬರ ಹೆಸರಿನಲ್ಲಿ ವೇತನ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ವೇತನ ಫಲಾನುಭವಿ ಕನ್ನಗಿ ಪಡೆಯುತ್ತಿದ್ದಾರೋ ಅಥವಾ ಅವರ ಹೆಸರಿನಲ್ಲಿ ಅಧಿಕಾರಿಗಳೇ ತಿಂಗಳ ವೇತನ ಗುಳುಂ ಮಾಡುತ್ತಿದ್ದಾರೋ ಆ ದೇವರೇ ಬಲ್ಲ.  ಬಿಬಿಎಂಪಿಯಲ್ಲಿ ಇಂತಹ ಇನ್ನೂ ಅದೆಷ್ಟೋ ಪ್ರಕರಣಗಳಿರಬಹುದು. ಈಗಲಾದರೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚೆತ್ತುಕೊಂಡು ಪಾಲಿಕೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲು ಮಾಡಲಿ ಎಂಬುದು ನಾಗರಿಕರ ಆಗ್ರಹವಾಗಿದೆ.

Facebook Comments

Sri Raghav

Admin