ಬೆಂಗಳೂರಲ್ಲಿ ಅಡ್ಡಾದಿಡ್ಡಿಯಾಗಿ ನೇತಾಡುವ ಕೇಬಲ್‍ಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿದ ಬಿಬಿಎಂಪಿ

Bengalur--01

ಬೆಂಗಳೂರು, ಆ.8- ಅಕ್ರಮ ಒಎಫ್‍ಸಿ ಕೇಬಲ್ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿರುವ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಇಂದು ನಗರದೆಲ್ಲೆಡೆ ಮುಲಾಜಿಲ್ಲದೆ ಒಎಫ್‍ಸಿ ಕೇಬಲ್ ತೆರವುಗೊಳಿಸಿತು. ಕನ್ನಿಂಗ್‍ಹ್ಯಾಮ್ ರಸ್ತೆಯ ಪಾದಚಾರಿ ಮಾರ್ಗವನ್ನು ಪ್ರಿಸಂ ಸಂಸ್ಥೆಯವರು ಹಾಳು ಮಾಡಿದ್ದರು. ಅದನ್ನು ಸರಿಪಡಿಸಲು ಬಿಬಿಎಂಪಿ ಸೂಚಿಸಿತ್ತು. ಇದಕ್ಕೆ ಸಂಸ್ಥೆ ಒಪ್ಪಿತ್ತು. ಒಟ್ಟು 5 ಲಕ್ಷ ದಂಡ 25ಸಾವಿರ ಪುಟ್‍ಪಾತ್ ಹಾನಿವೆಚ್ಚ ಕಟ್ಟುವಂತೆ ಸಂಸ್ಥೆಗೆ ನೋಟಿಸ್ ಸಹ ನೀಡಲಾಗಿತ್ತು.

ಆದರೆ, ಈವರೆಗೆ ಆ ಸಂಸ್ಥೆ ಪಾದಚಾರಿ ಮಾರ್ಗ ಸರಿಪಡಿಸಲು ಕ್ರಮಕೈಗೊಂಡಿರಲಿಲ್ಲ. ಹಾಗಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಆ ಸಂಸ್ಥೆಯ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರದೆಲ್ಲೆಡೆ ಟೆಂಡರ್‍ಶೂರ್ ರಸ್ತೆಗಳನ್ನು ಮಾಡಲಾಗಿದೆ. ಈ ರಸ್ತೆಗಳಲ್ಲೇ ಭೂಗರ್ಭದಲ್ಲಿ ಕೇಬಲ್ ಹಾಕಲು ಅನುವು ಮಾಡಿಕೊಡಲಾಗಿದೆ. ಆದರೂ ಕೆಲ ಕಂಪೆನಿಯವರು ಇಂತಹ ರಸ್ತೆಯಲ್ಲೇ ಮೇಲ್ಭಾಗದಲ್ಲಿ ಅನಧಿಕೃತವಾಗಿ ಒಎಫ್‍ಸಿ ಕೇಬಲ್ ಹಾಕಿದ್ದಾರೆ.

ಐಡಿಯಾ, ಏರ್‍ಟೆಲ್, ವೊಡಾಫೋನ್ ಸೇರಿದಂತೆ ಹಲವು ಟೆಲಿಕಾಂ ಸಂಸ್ಥೆಗಳಿಗೆ ಅಕ್ರಮವಾಗಿ ಒಎಫ್‍ಸಿ ಕೇಬಲ್ ಹಾಕಬಾರದು. ನಿಮಗೆ ಅವಕಾಶ ಮಾಡಿಕೊಟ್ಟಿರುವ ಭೂಗರ್ಭದಲ್ಲೇ ಕೇಬಲ್ ಹಾಕಬೇಕೆಂದು ಬಿಬಿಎಂಪಿ ಸೂಚಿಸಿ ನೋಟಿಸ್ ನೀಡಿತ್ತು. ಆದರೂ, ಕೆಲವು ಕಂಪೆನಿಗಳು ಅಕ್ರಮವಾಗಿ ಒಎಫ್‍ಸಿ ಕೇಬಲ್ ಅಳವಡಿಸಿವೆ.

ಇಂದು ಕೇವಲ ಟೆಂಡರ್‍ಶೂರ್ ರಸ್ತೆಯಲ್ಲಿ ಅಳವಡಿಸಿರುವ ಒಎಫ್‍ಸಿ ಕೇಬಲ್ ತೆರವುಗೊಳಿಸಿದ್ದೇವೆ. ನಾಳೆಯಿಂದ ನಗರದೆಲ್ಲೆಡೆ ಎಲ್ಲೇ ಆಗಲಿ ಒಎಫ್‍ಸಿ ಕೇಬಲ್ ಕಂಡರೆ ಅವುಗಳನ್ನು ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸುತ್ತೇವೆ ಎಂದು ಈ ವೇಳೆ ಸುದ್ದಿಗಾರರಿಗೆ ಗುಣಶೇಖರ್ ತಿಳಿಸಿದರು.
ಇದುವರೆಗೆ ನಗರದಲ್ಲಿ 9200ಕಿ.ಮೀ. ಒಎಫ್‍ಸಿ ಕೇಬಲ್ ಹಾಕಲು ಅನುಮತಿ ನೀಡಲಾಗಿದೆ. ಕಳೆದ ವರ್ಷವೇ ಅಕ್ರಮ ಕೇಬಲ್‍ಗಳ ಸಕ್ರಮ ಮಾಡಿ ಒಎಫ್‍ಸಿ ಕೇಬಲ್ ಅಳವಡಿಕೆಗೆ ಅನುಮತಿ ನೀಡಿದ್ದರಿಂದ 320ಕೋಟಿ ರೂ. ಆದಾಯ ಬಂದಿದೆ.

2017-18ನೇ ಸಾಲಿನಲ್ಲಿ 1200ಕಿ.ಮೀ. ಒಎಫ್‍ಸಿ ಕೇಬಲ್ ಅಳವಡಿಸಲು ಅನುಮತಿ ನೀಡಿರುವುದರಿಂದ 140 ಕೋಟಿ ಆದಾಯ ಬಂದಿದೆ. ಹಾಗಾಗಿ ಅಕ್ರಮವಾಗಿ ಒಎಫ್‍ಸಿ ಕಂಡುಬಂದರೆ ತೆರವು ಮಾಡಲಾಗುತ್ತದೆ. ಆದ್ದರಿಂದ ಆದಷ್ಟು ಬೇಗ ಕಂಪೆನಿಗಳು ದಂಡ ಕಟ್ಟಿ ಒಎಫ್‍ಸಿ ಸಕ್ರಮ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸಲಾಗುತ್ತದೆ ಎಂದು ಗುಣಶೇಖರ್ ತಿಳಿಸಿದರು.

Facebook Comments

Sri Raghav

Admin