ಮಲೆನಾಡಿನಲ್ಲಿ ಮತ್ತೆ ನಕ್ಸಲರ ದಾಂಧಲೆ, ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸ

Naxals-01

ಚಿಕ್ಕಮಗಳೂರು,ಆ.08- ಮಲೆನಾಡಿನಲ್ಲಿ ನಕ್ಸಲರು ಮತ್ತೆ ತಲೆ ಎತ್ತಿದ್ದಾರೆ. ಹಲವು ನಕ್ಸಲರು ಶರಣಾಗಿ ಸಮಾಜದ ಮುಖ್ಯ ವಾಹಿನಿಗೆ ಬರುತ್ತಿರುವ ನಡುವೆಯೇ ಶೃಂಗೇರಿ ತಾಲೂಕಿನ ಎಂ.ಆರ್. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಳ್ಳಭಟ್ಟಿ ನಿಯಂತ್ರಣ ಕಚೇರಿಗೆ ನುಗ್ಗಿರುವ ನಕ್ಸಲರು ಪೀಠೋಪಕರಣಗಳನ್ನು ಧ್ವಂಸ ಮಾಡಿ, ಅಟ್ಟಹಾಸ ಮೆರೆದಿದ್ದಾರೆ. ನಕ್ಸಲರ ಹೋರಾಟಕ್ಕೆ ಜಯವಾಗಲಿ ಎಂಬ ಭಿತ್ತಿ ಪತ್ರವನ್ನು ಅಂಟಿಸಿ ಹೋಗಿರುವ ಘಟನೆ ನಿನ್ನ್ನೆ ತಡರಾತ್ರಿ ನಡೆದಿದ್ದು, ಪೊಲೀಸರು, ಸಾರ್ವಜನಿಕರನ್ನು ನಿದ್ದೆಗೆಡಿಸಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಮೀಪದ ರಸ್ತೆ ವಿಸ್ತರಣೆ, ಅರಣ್ಯ ಹಕ್ಕು ಸಮಿತಿಗೆ ರೈತರು ಅರ್ಜಿ ಸಲ್ಲಿಸಿದರೂ ಸಾಗುವಳಿ ಚೀಟಿ ನೀಡದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ದಿಕ್ಕಾರ, ಶೃಂಗೇರಿ ಶಾಸಕ ಜೀವರಾಜ್ ಅವರಿಗೆ ಧಿಕ್ಕಾರ ನಕ್ಸಲರ ಹೋರಾಟಕ್ಕೆ ಜಯವಾಗಲಿ ಎಂಬ ಭಿತ್ತಿ ಪತ್ರಗಳ್ನು ಕಚೇರಿಯಲ್ಲಿ ನಕ್ಸಲರು ಅಂಟಿಸಿ ಹೋಗಿರುವುದರಿಂದ ಜನ ಭೀತಿಗೆ ಒಳಗಾಗಿದ್ದಾರೆ. ಇಷ್ಟು ದಿನ ನಕ್ಸಲರ ಭಯದಿಂದ ಮುಕ್ತರಾಗಿದ್ದ ಕಾಡಂಚಿನ ಜನರಿಗೆ ನಿನ್ನೆಯ ಘಟನೆ ಆತಂಕ ಸೃಷ್ಟಿಮಾಡಿದೆ.

ಈ ಘಟನೆ ಸಂಬಂಧ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅರಣ್ಯಾಧಿಕಾರಿ ರಾಜು ಪೊಲೀಸರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಕಾರ್ಕಳ ಡಿಸಿಎಫ್, ಗಣೇಶ್ ಭಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿ ವಿವಿಧ ಮಾಹಿತಿ ಕಲೆ ಹಾಕಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕಳೆದ 15 ದಿನಗಳ ಹಿಂದೆ ಕಮ್ಮರಡಿಯಲ್ಲಿ ನಕ್ಸಲರು ಕರಪತ್ರಗಳನ್ನು ಹಂಚಿಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹಾಗೂ ನಕ್ಸಲ್ ನಿಗ್ರಹ ದಳ ತಂಡ ಶೃಂಗೇರಿ ತಾಲೂಕಿನಾದ್ಯಂತ ನಕ್ಸಲರಿಗಾಗಿ ಕೂಂಬಿಂಗ್ ಕಾರ್ಯಚರಣೆ ನಡೆಸಲಾಗಿತ್ತು. ಆದರೂ ಅವರ ಯಾವ ಸುಳಿವು ಪತ್ತೆಯಾಗಲಿಲ್ಲ. ಇದೀಗ ಮತ್ತೆ ಅದೇ ಘಟನೆ ನಡೆದಿರುವುದರಿಂದ ಕೂಂಬಿಂಗ್ ಕಾರ್ಯಚರಣೆಯನ್ನು ಮುಂದುವರೆಸಲಾಗಿದೆ.

Facebook Comments

Sri Raghav

Admin