ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ : ದೊರೆಸ್ವಾಮಿ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

Doreswamy--01

ಬೆಂಗಳೂರು.ಆ 08. ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಾಚಾರ ಎಂಬ ಕೊಳಚೆಯಲ್ಲಿ ಬಿದ್ದು ಹೊರಳಾಡುತ್ತಿವೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿಷಾದಿಸಿದರು. ಜನತಾ ರಂಗ ಕರ್ನಾಟಕ 76ನೇ ಕ್ವಿಟ್ ಇಂಡಿಯಾ ಚಳವಳಿ ಸವಿನೆನಪಿನ ಕ್ರಾಂತಿ ದಿವಸದ ಅಂಗವಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಬಡತನ ನಿರ್ಮೂಲನೆ ಮಾಡುವುದು ಗಾಂಧೀಜಿಯವರ ಮೊದಲ ಆದ್ಯತೆಯಾಗಿತ್ತು. ಇದಕ್ಕಾಗಿಯೇ ಹಗಲಿರುಳು ಶ್ರಮಿಸಿದ್ದರು. ಇಂದು ಆಳುವ ಸರ್ಕಾರಗಳು ಬಡತನ ನಿರ್ಮೂಲನೆಯನ್ನು ಕೊನೆಯ ಆದ್ಯತೆಯನ್ನಾಗಿ ಮಾಡಿಕೊಂಡಿದ್ದು , ತಮ್ಮ ಆಸ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಇಂದು ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಮುಂದುವರೆದಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಳಿಸಿ ಹಾಕಿ ಇನ್ನುಳಿದ ಪಕ್ಷಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.   ತಮ್ಮ ಮಕ್ಕಳ ಮದುವೆ ಮಾಡುವ ಸಂದರ್ಭದಲ್ಲಿ ಹೇಗೆ ವಿಚಾರಿಸಿ ತಿಳಿದುಕೊಂಡು ಮದುವೆ ಮಾಡುತ್ತೇವೋ ಅದೇ ರೀತಿ ಚುನಾವಣೆ ಸಂದರ್ಭದಲ್ಲಿ ಯೋಚಿಸಿ ಅರ್ಹರಿಗೆ ಮತ ಚಲಾಯಿಸಬೇಕು ಎಂದರು.

ಮಾಜಿ ಶಾಸಕ ಮಹೀಮ ಪಟೇಲ್ ಮಾತನಾಡಿ, ನಾವು ಇಂದು ಬೇರೆಯವರನ್ನು ಟೀಕೆ ಮಾಡುವ ಕಾರ್ಯ ಮಾಡುತ್ತಿದ್ದೇವೆ. ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ದೇಶವನ್ನು ಯಾವ ರೀತಿ ಸುಧಾರಿಸಬಹುದು ಎಂಬ ಬಗ್ಗೆ ಚಿಂತಿಸಬೇಕು ಎಂದು ಹೇಳಿದರು.

Facebook Comments

Sri Raghav

Admin