ಐಟಿ ದಾಳಿ ನಂತರ ಪುಟಿದೆದ್ದ ಡಿಕೆಶಿ, ಕಾಂಗ್ರೆಸ್ ನಲ್ಲಿ ಈಗ ಹೀರೋ

ಈ ಸುದ್ದಿಯನ್ನು ಶೇರ್ ಮಾಡಿ

dk

ಬೆಂಗಳೂರು, ಆ.9-ಆಗುವುದೆಲ್ಲ ಒಳ್ಳೆಯದಕ್ಕೇ ಎನ್ನುವ ಹಾಗೆ ಐಟಿ ದಾಳಿಯಿಂದ ತತ್ತರಿಸಿ ಹೋಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಗುಜರಾತ್‍ನಿಂದ ರಾಜ್ಯಸಭೆಗೆ ನಡೆದ ಚುನಾವಣೆ ನಂತರ ಮತ್ತೆ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆಪರೇಷನ್ ಕಮಲದ ಭೀತಿಯಿಂದ ಕಂಗಾಲಾಗಿದ್ದ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಾಜ್ಯಕ್ಕೆ ಕರೆತಂದು ರಾಜಾತಿಥ್ಯ ನೀಡಿದ್ದ ಡಿಕೆಶಿ ಪ್ರಯತ್ನದಿಂದ ರಾಜ್ಯಸಭಾ ಚುನಾವಣೆಯಲ್ಲಿ ಸೋನಿಯಾ ಆಪ್ತ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್ ರೋಚಕ ಗೆಲುವು ಸಾಧಿಸಿದ್ದಾರೆ.

ಮೋದಿ -ಷಾ ತಂತ್ರದ ನಡುವೆಯೂ ಅಹಮ್ಮದ್ ಪಟೇಲ್ ಗೆಲುವು ಸಾಧಿಸಿರುವುದು ಡಿಕೆಶಿ ಪ್ರಯತ್ನಕ್ಕೆ ಸಂದ ಜಯ ಎಂದೇ ಬಿಂಬಿಸಲಾಗುತ್ತಿದೆ. ಸೋನಿಯಾ ಆಪ್ತ ಅಹಮ್ಮದ್ ಪಟೇಲ್ ಗೆಲುವಿನ ನಂತರ ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್ ಹೀರೋ ಆಗಿ ಮಿಂಚುತ್ತಿದ್ದಾರೆ.  ಷಾ ಮತ್ತು ಸೋನಿಯಾ ನಡುವಿನ ಜಿದ್ದಾಜಿದ್ದಿನ ಹೋರಾಟ ಎಂದೇ ಬಿಂಬಿಸಲಾಗಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಅಹಮ್ಮದ್ ಪಟೇಲ್ ಅವರನ್ನು ಸೋಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದ ಬಿಜೆಪಿ, ಆಪರೇಷನ್ ಕಮಲಕ್ಕೆ ಚಾಲನೆ ನೀಡಿತ್ತು.

ಎಲ್ಲಿ ಸೋಲನ್ನು ಅನುಭವಿಸಿದರೆ ಬಿಜೆಪಿ ವಿರುದ್ಧ ಮಂಡಿಯೂರಬೇಕಾಗುತ್ತದೋ ಎಂಬ ಭೀತಿಗೊಳಗಾಗಿದ್ದ ಕಾಂಗ್ರೆಸ್ ಹೈಕಮಾಂಡ್ ತಮ್ಮ ಪಕ್ಷದ ಶಾಸಕರಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳಲು ಮತ್ತು ಅವರಿಗೆ ಸೂಕ್ತ ರಕ್ಷಣೆ ನೀಡಲು ತಯಾರಿ ನಡೆಸಿತ್ತು. ಇಂತಹ ಸಂದರ್ಭದಲ್ಲಿ ಯಾರೊಬ್ಬ ಶಾಸಕರು ರಕ್ಷಣೆಗೆ ನಿಲ್ಲುವ ಪ್ರಯತ್ನ ಮಾಡಲಿಲ್ಲ. ಆದರೆ ಈ ಹಿಂದೆಯೂ ಉತ್ತರ ಭಾರತದ ಕಾಂಗ್ರೆಸ್ ಶಾಸಕರಿಗೆ ರಾಜಾತಿಥ್ಯ ನೀಡಿ ಸೈ ಎನಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್, ಈ ಬಾರಿಯೂ ಗುಜರಾತ್ ಶಾಸಕರ ರಕ್ಷಣೆಯ ಹೊಣೆ ಹೊತ್ತುಕೊಂಡರು.

ಗುಜರಾತ್‍ನ 44 ಶಾಸಕರನ್ನು ಬೆಂಗಳೂರು ಹೊರವಲಯದ ಈಗಲ್‍ಟನ್ ರೆಸಾರ್ಟ್‍ಗೆ ಕರೆತಂದು ಸೂಕ್ತ ರಕ್ಷಣೆ ಒದಗಿಸಿದ್ದರು. ಇಂತಹ ಸಂದರ್ಭದಲ್ಲೇ ಡಿ.ಕೆ.ಶಿವಕುಮಾರ್ ಅವರ ಸಾಮ್ರಾಜ್ಯದ ಮೇಲೆ ದಿಢೀರ್ ಐಟಿ ದಾಳಿ ನಡೆದರೂ ಶಿವಕುಮಾರ್ ಮಾತ್ರ ವಿಚಲಿತರಾಗಲಿಲ್ಲ.  ಐಟಿ ದಾಳಿ ಸಂದರ್ಭದಲ್ಲಿ ಗುಜರಾತ್ ಶಾಸಕರ ರಕ್ಷಣೆ ಹೊಣೆಯನ್ನು ಡಿ.ಕೆ.ಸುರೇಶ್ ಮತ್ತು ಮಾಗಡಿ ಶಾಸಕ ಬಾಲಕೃಷ್ಣ ಅವರ ಹೆಗಲಿಗೆ ಹೊರಿಸಿ ಯಾವುದೇ ಆತಂಕಕ್ಕೊಳಗಾಗಬೇಡಿ ಎಂದು ಧೈರ್ಯ ತುಂಬಿದ್ದರು.

ಮೂರು ದಿನಗಳ ದಾಳಿ ಪೂರ್ಣಗೊಂಡ ನಂತರವೂ ಡಿಕೆಶಿ ಗುಜರಾತ್ ಶಾಸಕರನ್ನು ಭೇಟಿಯಾಗಿ ಧೈರ್ಯ ತುಂಬಿದ್ದೇ ಅಲ್ಲದೆ, ಸ್ವತಃ ತಾವೇ ವಿಮಾನ ನಿಲ್ದಾಣದವರೆಗೂ ತೆರಳಿ ಬೀಳ್ಕೊಟ್ಟು ಒಗ್ಗಟ್ಟಿನಿಂದ ಕಾಂಗ್ರೆಸ್ ಪರ ಮತ ಚಲಾಯಿಸುವಂತೆ ಹುರಿದುಂಬಿಸಿದರು. ಡಿಕೆಶಿ ಅವರ ಈ ನಡೆಯೇ ಅಹಮ್ಮದ್ ಪಟೇಲ್ ಗೆಲುವಿಗೆ ಕಾರಣ ಎಂದು ಬಿಂಬಿಸಲಾಗಿದ್ದು, ಸ್ವತಃ ಸೋನಿಯಾಗಾಂಧಿ ಅವರೇ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದಿಸಿದ್ದಾರೆ. ಈ ಬೆಳವಣಿಗೆ ನಂತರ ಶಿವಕುಮಾರ್ ಮತ್ತೆ ಹೀರೋ ಆಗಿ ಹೊರಹೊಮ್ಮಿದ್ದಾರೆ. ಕೆಲವೇ ತಿಂಗಳುಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಬೇಕಾದ ಸನ್ನಿವೇಶದಲ್ಲಿ ಹೈಕಮಾಂಡ್‍ನಲ್ಲಿ ಡಿಕೆಶಿ ಶಹಭಾಷ್‍ಗಿರಿ ಗಿಟ್ಟಿಸಿಕೊಂಡಿರುವುದು ರಾಜ್ಯ ರಾಜಕಾರಣದಲ್ಲಿ ಸಕಾರಾತ್ಮಕ ಬೆಳವಣಿಗೆ ಎಂದೇ ಹೇಳಲಾಗುತ್ತಿದೆ.

Facebook Comments

Sri Raghav

Admin