ಕಾರ್ಯಕರ್ತರಲ್ಲಿ ಜೋಷ್ ತುಂಬಿದ ಡಿ.ಕೆ.ಶಿವಕುಮಾರ್

DK-Shivakumara-Congress

ಬೆಂಗಳೂರು, ಆ.9- ಯಾವುದೇ ಕಷ್ಟಗಳಿಗೂ ಹೆದರಬೇಡಿ, ಗ್ರಹಣ ಬಂದರೂ ಹೆಚ್ಚು ಸಮಯ ನಿಲ್ಲಲು ಸಾಧ್ಯವಿಲ್ಲ. ಸತ್ಯ-ನಿಷ್ಠೆಗೆ ಸದಾ ಗೆಲುವು ಇದ್ದೇ ಇರುತ್ತದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಿದರು. ಕ್ವಿಟ್ ಇಂಡಿಯಾ ಚಳವಳಿಯ 75ನೆ ವರ್ಷಾಚರಣೆ ಅಂಗವಾಗಿ ನಗರದ ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ವರೆಗೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ರ್ಯಾಲಿ ನಡೆಸಿದರು. ಬಿಳಿ ಸಮವಸ್ತ್ರಧಾರಿಗಳಾಗಿ ಗಾಂಧಿ ಟೋಪಿ ಧರಿಸಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಹಾದಿಯುದ್ದಕ್ಕೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಮಹನೀಯರ ಸಂದೇಶಗಳ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಫ್ರೀಡಂಪಾರ್ಕ್‍ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಶಾಸಕರು, ಸಚಿವರು, ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಆಗಸ್ಟ್ ತಿಂಗಳ ಆರಂಭದಿಂದ ನಮ್ಮ ಪಕ್ಷಕ್ಕೆ ಗ್ರಹಣ ಆವರಿಸಿತ್ತು. ಇಂದು ಗುಜರಾತ್‍ನಲ್ಲಿ ಅಹಮ್ಮದ್ ಪಟೇಲ್ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅದು ಬಿಟ್ಟು ಹೋಯಿತು. ಇಂತಹ ಕಷ್ಟಗಳು ಎಷ್ಟೇ ಬಂದರೂ ಹೆದರಬೇಡಿ, ಯಾರು ಎಷ್ಟೇ ಪ್ರಯತ್ನಪಟ್ಟರೂ ಸತ್ಯಕ್ಕೆ ಜಯ ಇದ್ದೇ ಇದೆ ಎಂದು ಹೇಳಿದರು. ಕಷ್ಟ ಕಾಲದಲ್ಲಿ ತಮ್ಮ ಜೊತೆಗೆ ನಿಂತ ಪಕ್ಷದ ಎಲ್ಲ ನಾಯಕರಿಗೂ ಡಿ.ಕೆ.ಶಿವಕುಮಾರ್ ಕೃತಜ್ಞತೆ ಸಲ್ಲಿಸಿದರು.

ಗುಜರಾತ್‍ನಲ್ಲಿ ಬಿಜೆಪಿ ಶಕ್ತಿ ಕುಂದುತ್ತಿದೆ. ಅದಕ್ಕಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ಹೀಗಾಗಿ ಬಿಜೆಪಿ ನಾಯಕರಿಗೆ ಭಯ ಆರಂಭವಾಗಿದೆ. ಕಾಂಗ್ರೆಸ್ ನಾಯಕರನ್ನು ಆಹ್ವಾನಿಸುತ್ತಿದ್ದಾರೆ. ಇದಾವುದೂ ಯಶಸ್ವಿಯಾಗುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷದಲ್ಲಿರುವುದು ಹೆಮ್ಮೆಯ ವಿಷಯ. ರಾಷ್ಟ್ರಧ್ವಜ ಹಿಡಿಯಲು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಯೋಗ್ಯತೆ ಇದೆ. ಬೇರೆ ಯಾವ ಪಕ್ಷಕ್ಕೂ ಇಲ್ಲ ಎಂದ ಅವರು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‍ಅನ್ನು ಮರಳಿ ಅಧಿಕಾರಕ್ಕೆ ತರಲು ಪಣ ತೊಡೋಣ. ಕಾರ್ಯಕರ್ತರೇ ಪಕ್ಷದ ಆಸ್ತಿ. ನಿಮ್ಮಿಂದ ಮಾತ್ರ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಅವರು ಹೇಳಿದರು.

Facebook Comments

Sri Raghav

Admin