ಕೊನೆಗೂ ಗೆದ್ದ ಅಹ್ಮದ್ ಪಟೇಲ್, ಅಮಿತ್ ಷಾ ತಂತ್ರ ಫೇಲ್

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--01

ಅಹ್ಮದಾಬಾದ್, ಆ. 9: ಗುಜರಾತ್ ನಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಜಯ ಸಾಧಿಸಿದ್ದಾರೆ. ತಡೆ ಹಿಡಿದಿದ್ದ ಫಲಿತಾಮಹಸ ಕೊನೆಗೂ ತಡರಾತ್ರಿ ಹೊರಬಿದ್ದಿದೆ. ಈ ಮೂಲಕ ತಮ್ಮ ಸೋಲಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾಡಿದ್ದ ತಂತ್ರಗಾರಿಕೆಯನ್ನು ವಿಫಲಗೊಳಿಸಿದ್ದಾರೆ. ಅಹ್ಮದ್ ಪಟೇಲ್ ಪರಾಭವಕ್ಕೆ ರಣತಂತ್ರ ಹೆಣೆದಿದ್ದ ಅಮಿತ್ ಶಾ 51 ಕಾಂಗ್ರೆಸ್ ಶಾಸಕರ ಪೈಕಿ ಏಳು ಮಂದಿಯನ್ನು ಚುನಾವಣೆಗೂ ಮುನ್ನವೇ ಸೆಳೆಯಲು ಸಫಲರಾಗಿದ್ದರು.

ಗೆಲುವಿನ ನಂತರ ಪ್ರತಿಕ್ರಿಯಿಸಿದ ಅಹ್ಮದ್ ಪಟೇಲ್ ”ಇಂದಿನ ರಾಜಕೀಯದಲ್ಲಿ ಹಣ ಬೆಂಬಲ, ಜನ ಬೆಂಬಲವಿದ್ದರೆ ಸಾಕು ಎಂಥ ಸವಾಲನ್ನಾಗಲೀ ಗೆಲ್ಲುತ್ತೇನೆ ಎಂಬ ಸಿದ್ಧಾಂತಕ್ಕೆ ಸೋಲಾಗಿದೆ. ಹಾಗಾಗಿ, ನನ್ನ ಗೆಲುವು ಸತ್ಯದ ಗೆಲುವಾಗಿದ್ದು, ಸತ್ಯಮೇವ ಜಯತೆ ಎಂದು ಬಣ್ಣಿಸಲು ಇಚ್ಛಿಸುತ್ತೇನೆ” ಎಂದಿದ್ದಾರೆ.

ರಾಜಕೀಯದಾಟದಲ್ಲಿ ಅಹ್ಮದ್ ಪಟೇಲ್ ಅವರನ್ನು ಸೋಲಿಸಲು ಇನ್ನಿಲ್ಲದ ಕಸರತ್ತು ಮಾಡಿದ್ದ ಆಡಳಿತಾರೂಢ ಬಿಜೆಪಿ ಪಕ್ಷವು, ರಾಜ್ಯಸಭಾ ಚುನಾವಣೆಯಲ್ಲಿ ಪಟೇಲ್ ವಿರುದ್ಧ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿದ್ದ ಬಲವಂತಸಿನ್ಹ ರಜಪೂತ್ ಅವರನ್ನು ಕಣಕ್ಕಿಳಿಸಿತ್ತು. ಅಹ್ಮದ್ ಪಟೇಲ್ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ನಿರ್ಧರಿಸಿದ್ದ ಬಿಜೆಪಿ, ಕಾಂಗ್ರೆಸ್ ಶಾಸಕರನ್ನು ಖರೀದಿಸುವ ತಂತ್ರಗಾರಿಕೆಗೆ ಕೈಹಾಕಿತ್ತೆಂಬ ವದಂತಿಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನ ಎಲ್ಲಾ 44 ಶಾಸಕರನ್ನು ಬೆಂಗಳೂರಿಗೆ ಹೈಜಾಕ್ ಮಾಡಿ ಕರೆತರಲಾಗಿತ್ತು. ಆ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಶಾಸಕರು, ಪ್ರತಿ ಶಾಸಕನಿಗೆ 15 ಕೋಟಿ ರು. ನೀಡುವ ಆಮಿಷವನ್ನು ಬಿಜೆಪಿ ನೀಡಿತ್ತೆಂದು ಹೇಳಿದ್ದರು. ರಾಜ್ಯಸಭೆ ಚುನಾವಣೆಯ ಮುನ್ನಾದಿನ ಎಲ್ಲರೂ ಬೆಂಗಳೂರಿನಿಂದ ಗುಜರಾತ್ ಗೆ ವಾಪಸ್ಸಾಗಿದ್ದರು.

ಆದರೂ, ಬಿಜೆಪಿಗೆ ಮರುಳಾಗಿದ್ದ ಕಾಂಗ್ರೆಸ್ ಇಬ್ಬರು ಶಾಸಕರಾದ ಭೋಲಾ ಭಾಯಿ ಗೋಗಿಲ್, ರಾಘವ್ ಭಾಯಿ ಪಟೇಲ್ ಅವರು ಅಡ್ಡಮತದಾನ ಹಾಕಿ, ಅಹ್ಮದ್ ಪಟೇಲ್ ಅವರಿಗೆ ಕೊನೇ ಕ್ಷಣದಲ್ಲಿ ಕೈ ಕೊಟ್ಟರೂ, ಕೇಂದ್ರ ಚುನಾವಣಾ ಆಯೋಗವು ಇವರ ಮತಗಳನ್ನು ಅಸಿಂಧುಗೊಳಿಸಿದ್ದರಿಂದಾಗಿ, ಜಯ ಅಹ್ಮದ್ ಪಟೇಲ್ ಅವರಿಗೇ ದಕ್ಕಿವೆ.

Facebook Comments

Sri Raghav

Admin