ಚುನಾವಣಾ ಆಯೋಗದ ತೀರ್ಮಾನದ ವಿರುದ್ಧ ಕಾನೂನು ಸಮರಕ್ಕೆ ಬಿಜೆಪಿ ಸಜ್ಜು

Vijaya-----01

ನವದೆಹಲಿ,ಆ.9- ಇಡೀ ದೇಶದ ಗಮನಸೆಳೆದಿದ್ದ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಇಬ್ಬರು ಶಾಸಕರ ಮತದಾನವನ್ನು ಅಸಿಂಧುಗೊಳಿಸಿದ ಚುನಾವಣಾ ಆಯೋಗದ ತೀರ್ಮಾನದ ವಿರುದ್ಧ ಬಿಜೆಪಿ ಕಾನೂನು ಸಮರ ಸಾರಲು ಮುಂದಾಗಿದೆ.  ಚುನಾವಣಾ ಏಜೆಂಟರ್‍ಗೆ ಮತ ತೋರಿಸದೆ ಹಕ್ಕು ಚಲಾಯಿಸಿದ್ದರೆಂಬ ಕಾರಣಕ್ಕಾಗಿ ಎರಡು ಮತಗಳನ್ನು ಅಸಿಂಧುಗೊಳಿಸಲಾಗಿತ್ತು. ಇದು ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಗೆಲುವಿಗೆ ಕಾರಣವಾಯಿತು.
ಇದೀಗ ಬಿಜೆಪಿ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಹೋಗಲಿದ್ದೇವೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.

ಗುಜರಾತ್ ವಿಧಾನಸಭೆಯಲ್ಲಿ ಪ್ರತಿಪಕ್ಷವಾಗಿರುವ ಕಾಂಗ್ರೆಸ್ 61 ಶಾಸಕರನ್ನು ಹೊಂದಿತ್ತು. ಕೆಲವರು ರಾಜೀನಾಮೆ, ಅಡ್ಡ ಮತದಾನ ಚಲಾಯಿಸಿದ ಪರಿಣಾಮ ಅಹಮ್ಮದ್ ಪಟೇಲ್ 44 ಮತಗಳನ್ನು ಪಡೆದಿದ್ದರು. ಅವರ ಪ್ರತಿಸ್ಪರ್ಧಿ ಬಿಜೆಪಿಯ ರಜಪೂತ್ ಸಿಂಗ್ 42 ಮತಗಳನ್ನು ಪಡೆದಿದ್ದರು.  ಇಬ್ಬರ ಮತಗಳು ಕುಲಗೆಟ್ಟ ಪರಿಣಾಮ ಮೊದಲ ಪ್ರಾಶಸ್ತ್ಯದ ಮತದ ಮೇಲೆ ವಿಜಯಲಕ್ಷ್ಮಿ ಅಹಮ್ಮದ್ ಪಟೇಲ್‍ಗೆ ಒಲಿದಳು. ನಾವು ಚುನಾವಣಾ ಆಯೋಗದ ತೀರ್ಮಾನವನ್ನು ಒಪ್ಪಲು ಸಾಧ್ಯವಿಲ್ಲ. ಇಬ್ಬರು ಶಾಸಕರ ಮತವನ್ನು ಅಸಿಂಧುಗೊಳಿಸಿರುವುದು ಕಾನೂನು ಬಾಹಿರ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಾಗಿದ್ದು , ಒಂದೆರಡು ದಿನಗಳಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಹಲವು ನಾಟಕೀಯ ವಿದ್ಯಮಾನಗಳನ್ನು ಕಂಡ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಗೆದ್ದರೆ, ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಗೆಲುವು ಸಾಧಿಸಿದರು.

Facebook Comments

Sri Raghav

Admin