ಡಿಕೆಶಿಗೆ ‘ದೊಡ್ಡ’ ಹುದ್ದೆ, ಹೈಕಮಾಂಡ್ ಅಭಯ

DK-Shivakumar--01

ಬೆಂಗಳೂರು,ಆ.9- ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಸೋನಿಯಾ ಆಪ್ತ ಕಾರ್ಯದರ್ಶಿ ಅಹಮದ್ ಪಟೇಲ್ ಗೆಲುವಿಗೆ ಕಾರಣಕರ್ತರಾದ ಡಿಕೆಶಿ ಅವರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹೈಕಮಾಂಡ್‍ನ ಪ್ರಭಾವಿ ನಾಯಕರು ಕರೆ ಮಾಡಿ ಕೃತಜ್ಞತೆಗಳನ್ನು ಹೇಳಿದ್ದು , ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡುವುದಾಗಿ ಭರವಸೆ ನೀಡಿದ್ದಾರೆ. ನಿನ್ನೆ ತಡರಾತ್ರಿ 2 ಗಂಟೆ ಸುಮಾರಿನಲ್ಲಿ ಅಹಮದ್ ಪಟೇಲ್ ಗೆಲುವಿನ ಘೋಷಣೆಯಾಯಿತು. ಬಿಜೆಪಿ ನಾಯಕರಾದ ಅಮಿತ್ ಷಾ ಅವರ ಪ್ರಬಲ ಪ್ರತಿರೋಧದ ನಡುವೆಯೂ ಅಹಮ್ಮದ್ ಪಟೇಲ್ ಗೆಲುವು ಕಾಂಗ್ರೆಸ್‍ನ ಚೈತನ್ಯವನ್ನು ದುಪ್ಪಟ್ಟು ಮಾಡಿದೆ. ಬಿಜೆಪಿಗೆ ಆಕ್ರಮಣಕಾರಿಯಾಗಿ ಸೆಡ್ಡು ಡಿ.ಕೆ.ಶಿವಕುಮಾರ್‍ರಂತಹ ನಾಯಕರನ್ನು ದೇಶಾದ್ಯಂತ ಪ್ರಮುಖ ವೇದಿಕೆಗೆ ತರುವ ಚಿಂತನೆ ಆರಂಭವಾಗಿರುವುದನ್ನು ಹೈಕಮಾಂಡ್ ನಾಯಕರು ತಿಳಿಸಿದ್ದಾರೆ.

ಇಂದು ಬೆಳಗೆಯಿಂದಲೂ ಡಿ.ಕೆ.ಶಿವಕುಮಾರ್ ಅವರಿಗೆ ದೂರವಾಣಿ ಕರೆಗಳ ಸುರಿಮಳೆ ಆರಂಭವಾಗಿದೆ. ಸೋನಿಯಾ, ಅಹಮ್ಮದ್ ಪಟೇಲ್, ರಾಹುಲ್‍ಗಾಂಧಿ, ದಿಗ್ವಿಜಯ್ ಸಿಂಗ್, ಕರ್ನಾಟಕ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸೇರಿದಂತೆ ಹಲವು ನಾಯಕರು ಕರೆ ಮಾಡಿದ್ದಾರೆ. ಗುಜರಾತ್‍ನಲ್ಲಿ ಬಿಜೆಪಿ ನಡೆಸಿದ್ದ ಆಪರೇಷನ್ ಕಮಲ ತಡೆಯಲು 44ಕ್ಕೂ ಹೆಚ್ಚು ಶಾಸಕರನ್ನು ಕಾಂಗ್ರೆಸ್ ಹೈಕಮಾಂಡ್ ನಾಯಕರು ಕರ್ನಾಟಕಕ್ಕೆ ಕಳುಹಿಸಿದ್ದರು. ಅವರಿಗೆ ಆತಿಥ್ಯ ನೀಡಲು ಪ್ರಭಾವಿ ಸಚಿವರು ಸೇರಿದಂತೆ ಕಾಂಗ್ರೆಸ್ ನಾಯಕರು ಹಿಂದೇಟು ಹಾಕಿದ್ದರು.

ಆ ಸಂದರ್ಭದಲ್ಲಿ ವಿದೇಶಿ ಪ್ರವಾಸ ಮುಗಿಸಿ ಬಂದ ಗುಜರಾತ್ ಶಾಸಕರ ಕಾವಲಿಗೆ ನಿಂತು ಬಿಜೆಪಿ ನಾಯಕರು ಏನೇ ಸಾಹಸ ಮಾಡಿದರೂ ಗುಜರಾತ್ ಶಾಸಕರನ್ನು ತಲುಪಲು ಡಿಕೆಶಿ ಹಾಗೂ ಡಿ.ಕೆ.ಸುರೇಶ್ ಅವಕಾಶ ನೀಡಿಲ್ಲ. ಈ ಹಂತದಲ್ಲಿ ಕೇಂದ್ರ ಸರ್ಕಾರ ಐಟಿ ಅಧಿಕಾರಿಗಳನ್ನು ಡಿಕೆಶಿ ಅವರ ಮನೆ ಬಂಧುಬಳಗ ಹಾಗೂ ಸ್ನೇಹಿತರ ಮೇಲೆ ಛೂ ಬಿಟ್ಟು ಏಕಕಾಲಕ್ಕೆ 69 ಕಡೆ ಐಟಿ ದಾಳಿ ನಡೆಸುವಂತೆ ನೋಡಿಕೊಂಡಿತು.

ನಮ್ಮಿಂದಾಗಿ ನೀವು ಐಟಿ ದಾಳಿಯಂತಹ ಅಗ್ನಿಪರೀಕ್ಷೆ ಎದುರಿಸುವ ರಿಸ್ಕ್ ತೆಗೆದುಕೊಂಡಿರಿ, ಸಂಕಷ್ಟದ ಪರಿಸ್ಥಿತಿಯಲ್ಲೂ ಗುಜರಾತ್ ಶಾಸಕರಿಗೆ ತೊಂದರೆಯಾಗದಂತೆ ರಕ್ಷಣೆ ನೀಡಿ ಪಕ್ಷವನ್ನು ಕಾಪಾಡಿದ್ದೀರಾ ಎಂದು ಹೈಕಮಾಂಡ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.   ಮೊದಲಿಂದಲೂ ನಿಮ್ಮ ಪಕ್ಷ ನಿಷ್ಠೆ ಹಲವು ಬಾರಿ ಸಾಬೀತಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಲು ನಿಮ್ಮ ಪಾತ್ರ ಮಹತ್ವದಿದೆ. ಪಕ್ಷ ಪುನಃ ಅಧಿಕಾರಕ್ಕೆ ಬಂದರೆ ನಿಮಗೆ ಪ್ರಮುಖ ಜವಾಬ್ದಾರಿ ಸಿಗಲಿದೆ ಎಂಬ ಭರವಸೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin