ಪಟೇಲ್‍ಗೆ ಅದೃಷ್ಟ ತಂದ ಅಡ್ಡ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

Ahamad-Patel--01

ಗುಜರಾತ್, ಆ.9-ಅಪಾರ ಕುತೂಹಲ ಕೆರಳಿಸಿದ್ದ ಗುಜರಾತ್‍ನ ಮೂರು ರಾಜ್ಯಸಭಾ ಸ್ಥಾನಗಳ ಚುನಾವಣಾ ಫಲಿತಾಂಶದಲ್ಲಿ ಹೈಡ್ರಾಮಾದ ಬಳಿಕ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಪರಮಾಪ್ತ ಅಹ್ಮದ್ ಪಟೇಲ್ ರಾಜ್ಯ ಸಭೆಗೆ ಐದನೇ ಬಾರಿ ಪುನರಾಯ್ಕೆ ಆಗಿ ಗಮನಸೆಳೆದಿದ್ದಾರೆ. ಕ್ರಾಸ್ ಓಟ್‍ನಿಂದ ಪರಾಭವಗೊಳ್ಳುವ ಸಾಧ್ಯತೆ ಬಗ್ಗೆ ಅತಂಕಗೊಂಡಿದ್ದ ಕೈ ಪಾಳೆಯಕ್ಕೆ ಆ ಅಡ್ಡ ಮತಗಳೇ ಅದೃಷ್ಟದ ಮ್ಯಾಜಿಕ್ ಸಂಖ್ಯೆಯಾಗಿದ್ದು ಅಚ್ಚರಿಯೂ ಹೌದು, ವಿಸ್ಮಯದ ವಿದ್ಯಮಾನವೂ ಹೌದು.

ರಾಜ್ಯಸಭೆಯ ಮೂರು ಸ್ಥಾನಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಕೇಂದ್ರ ಸಚಿವೆ ಸ್ಮತಿ ಇರಾನಿ ವಿಜೇತರಾದರು. ಆದರೆ 3ನೇ ಸ್ಥಾನದ ಆಯ್ಕೆಗಾಗಿ ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತು ಕಾಂಗ್ರೆಸ್‍ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಬಲವಂತ ಸಿನ್ಹಾ ರಜಪೂತ್ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿತ್ತು. ರಾಜಕೀಯ ಮೇಲಾಟದಲ್ಲಿ ಪಟೇಲ್ ಗೆಲುವು ಕಬ್ಬಿಣದ ಕಡಲೆಯಂತಾಗಿ ಅವರ ಭವಿಷ್ಯ ಡೋಲಾಯಾಮಾನವಾಗಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಅದೃಷ್ಟ ಅಹ್ಮದ್‍ರನ್ನು ಸೋಲಿನ ದವಡೆಯಿಂದ ಪಾರು ಮಾಡಿತು.

ಪಟೇಲ್‍ಗೆ ತಮ್ಮ ಗೆಲುವು ಕತ್ತಿಯ ಅಲಗಿನ ಮೇಲಿನ ಅಟದಂತಾಗಿತ್ತು. ಮತದಾನದ ವೇಳೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಮತ್ತು ಪ್ರತಿದೂರು ನೀಡಿದ್ದರಿಂದ ಮತ ಎಣಿಕೆ ವಿಳಂಬವಾಯಿತು. ಈ ದೂರುಗಳ ಇತ್ಯರ್ಥದಲ್ಲೇ ನಡು ರಾತ್ರಿ 1 ಗಂಟೆಯಾಯಿತು. ಈ ಎಲ್ಲ ಹೈಡ್ರಾಮಾಗಳ ನಡುವೆ 1.50ರಲ್ಲಿ ಮತ ಎಣಿಕೆ ಪೂರ್ಣಗೊಂಡಿತು.

ನಿಯಮದ ಪ್ರಕಾರ ಪಟೇಲ್ ಗೆಲ್ಲಲು 45 ಮತಗಳು ಬೇಕಿದ್ದವು. ಆದರೆ ಇಬ್ಬರು ಬಂಡಾಯ ಶಾಸಕರ ಮತ ಅಸಿಂಧುವಾದ ಕಾರಣ 44 ಮತಗಳು ಸಾಕಾಗಿತ್ತು. ಇವರಿಗೆ ಸಂದಾಯವಾದ ಮತಗಳೂ ಕೂಡ 44. ಅಹ್ಮದ್ ಅವರಿಗೆ ಬಿಜೆಪಿ, ಎನ್‍ಸಿಪಿ ಮತ್ತು ಜೆಡಿಯು ಪಕ್ಷದ ತಲಾ ಒಬ್ಬೊಬ್ಬ ಶಾಸಕರು ಮತ ಚಲಾಯಿಸಿದ್ದಾರೆ. ಇದರಿಂದ ಅವರು ಒಟ್ಟು 44 ಮ್ಯಾಜಿಕ್ ಸಂಖ್ಯೆಯೊಂದಿಗೆ ಗೆಲವು ಸಾಧಿಸಿದರು.  ಆಪರೇಷನ್ ಕಮಲ ಭೀತಿಯಿಂದ ಬಿಡದಿ ರೆಸಾರ್ಟ್‍ನಲ್ಲಿದ್ದ 44 ಶಾಸಕರ ಪೈಕಿ ಕರಮ್ಮಿ ಪಟೇಲ್ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಜೆಡಿಯು ಏಕೈಕ ಶಾಸಕ ಛೋಟು ಭಾಯ್ ವಾಸ್ವ ಹಾಗೂ ಎನ್‍ಸಿಪಿಯ ಜಯಂತ್ ಪಟೇಲ್ ಅಹ್ಮದ್ ಪರ ಹಕ್ಕು ಚಲಾಯಿಸಿದ್ದಾರೆ. ಆದರೆ ಮತ್ತೊಬ್ಬ ಶಾಸಕ ಎನ್‍ಸಿಪಿ ಶಾಸಕ ಕಂಧಾಲ್ ಜಡೇಜಾ ಮತದಾನಕ್ಕೆ ಮುನ್ನ ಅಮಿತ್ óಷಾ ಕಾಲು ಮುಟ್ಟಿ ನಮಸ್ಕರಿಸಿದರು. ಆದರೆ ಅವರು ಯಾರಿಗೆ ಮತ ಹಾಕಿದ್ದಾರೆ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ.

ಮಧ್ಯರಾತ್ರಿ ಸಿಡಿದ ಪಟಾಕಿ-ಸಿಡಿಮದ್ದುಗಳು :

44 ಮತಗಳೊಂದಿಗೆ ಅಹ್ಮದ್ ಪಟೇಲ್ ವಿಜೇತರಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ ಮುಗಿಲು ಮುಟ್ಟಿತು. ನಡು ರಾತ್ರಿಯಲ್ಲೇ ಪಟಾಕಿ ಸಿಡಿಮದ್ದುಗಳನ್ನು ಸಿಡಿಸಿ ಸಿಹಿ ಹಂಚಿ ಗೆಲುವಿನ ಸಂಭ್ರಮ ಆಚರಿಸಿಕೊಂಡರು.

Facebook Comments

Sri Raghav

Admin