ಭಾರತದ ಸ್ವಾತಂತ್ರ್ಯ ಚಳವಳಿ ಇಡೀ ವಿಶ್ವಕ್ಕೇ ಮಾದರಿ : ಮೋದಿ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ನವದೆಹಲಿ, ಆ.9- ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಸಂದೇಶವು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ವಿಶ್ವದ ಇತರ ಭಾಗಗಳಲ್ಲಿನ ವಸಾಹತುಶಾಹಿಯನ್ನು ಕೊನೆಗೊಳಿಸುವ ಚಳವಳಿಯ ವ್ಯಾಖ್ಯಾನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿಯ 75ನೆ ವರ್ಷಾಚರಣೆ ಅಂಗವಾಗಿ ಸಂಸತ್‍ನಲ್ಲಿ ಇಂದು ನಡೆದ ವಿಶೇಷ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಭಾರತ ಬಿಟ್ಟು ತೊಲಗಿ ಎಂದು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟವು ಹೊಸ ನಾಯಕತ್ವ ಉಗಮದ ದ್ಯೋತಕವಾಗಿದೆ ಎಂದು ವಿಶ್ಲೇಷಿಸಿದರು.

ತಮ್ಮ ಭಾಷಣದುದ್ದಕ್ಕೂ ಎಂದಿನಂತೆ ಭ್ರಷ್ಟಾಚಾರ, ಕೋಮುವಾದದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಇಂಥ ಅನಿಷ್ಟಗಳನ್ನು ಸಂಕಲ್ಪ ಸೆ ಸಿದ್ಧಿ ದಿನವಾದ ಇಂದು ನಿರ್ಮೂಲನೆ ಮಾಡಲು ನಾವೆಲ್ಲ ಪಣ ತೊಡೋಣ ಎಂದು ಕರೆ ನೀಡಿದರು. ಬಡತನ, ದಾರಿದ್ರ್ಯ, ಶಿಕ್ಷಣ ಕೊರತೆ, ಅಪೌಷ್ಠಿಕತೆ ನಮ್ಮ ದೇಶದ ಮುಂದೆ ದೊಡ್ಡ ಸವಾಲಾಗಿ ನಿಂತಿದೆ. ಇವುಗಳನ್ನು ಮೂಲೋತ್ಪಾಟನೆ ಮಾಡಿ, ಪೂರಕ ಬದಲಾವಣೆಗಳನ್ನು ತರುವ ಅಗತ್ಯವಿದೆ ಎಂದು ಅವರು ಸಲಹೆ ಮಾಡಿದರು.
ಭ್ರಷ್ಟಾಚಾರವು ಒಳಗಿನಿಂದಲೇ ನಮ್ಮ ಪ್ರಜಾರಾಜ್ಯ ವ್ಯವಸ್ಥೆಯನ್ನು ತಿನ್ನುತ್ತಿದೆ. ಈ ಪಿಡುಗಿನ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಡೋಣ. ಈ ನಿಟ್ಟಿನಲ್ಲಿ ನಾವೆಲ್ಲರೂ ಇಂದು ಶಪಥ ಮಾಡೋಣ ಎಂದು ಮೋದಿ ಹೇಳಿದರು.

2017ರಿಂದ 2022ಕ್ಕೆ ಭಾರತವು 75ನೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತದೆ. 1942 ರಿಂದ 1947ರ ವರೆಗೆ ಅಸ್ತಿತ್ವದಲ್ಲಿದ್ದ ಹೋರಾಟದ ಉತ್ಸಾಹ ಮತ್ತು ಕಿಚ್ಚನ್ನು ನಾವು ಈ ಅವಧಿಯಲ್ಲಿಯೂ ಮರುಸೃಷ್ಟಿ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು. 1942ರಲ್ಲಿ ಕರೇಂಗೆ ಯಾ ಮಿರೇಂಗೆ (ಮಾಡು ಇಲ್ಲವೆ ಮಡಿ) ಎಂಬುದು ಧ್ಯೇಯವಾಕ್ಯವಾಗಿತ್ತು. ಇದು ಕರೇಂಗೆ ಔರ್ ಕರ್‍ಕೆ ರಹೇಂಗೆ (ಮಾಡು ಹಾಗೂ ಮಾಡುತ್ತಲೇ ಇರು) ಎಂಬುದು ಉದ್ಘೋಷದ ವಾಕ್ಯವಾಗಿದೆ ಎಂದು ಮೋದಿ ಅರ್ಥೈಸಿದರು.

Facebook Comments

Sri Raghav

Admin