ಮಧ್ಯರಾತ್ರಿ ಮನೆಗೆ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Murder-Blood

ತುಮಕೂರು, ಆ.9- ಮಧ್ಯರಾತ್ರಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿರುವ ಅಮಾನವೀಯ ಘಟನೆ ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಾಗಲವಾಡಿ ಗ್ರಾಮದ ಕೃಷ್ಣಮೂರ್ತಿ-ಬಸಮ್ಮ ಎಂಬುವರ ಮಗನಾದ ಲೋಕೇಶ್ (42) ಕೊಲೆಯಾದ ದುರ್ದೈವಿ. ಕೌಟುಂಬಿಕ ಕಲಹದಿಂದಾಗಿ ಕಳೆದ ಎರಡು ವರ್ಷಗಳ ಹಿಂದೆ ಪತಿ ಲೋಕೇಶ್‍ನನ್ನು ತೊರೆದು ಪತ್ನಿ ತವರು ಮನೆ ಸೇರಿದ್ದರು. ಹಾಗಾಗಿ ಲೋಕೇಶ್ ಒಂಟಿಯಾಗಿ ವಾಸವಾಗಿದ್ದನು. ಲೋಕೇಶ್ ಹೊಲದಲ್ಲಿ ಕೆಲಸ ಮಾಡುತ್ತ ಮನೆಯಲ್ಲೇ ಕಂಪ್ಯೂಟರ್ ಇಟ್ಟುಕೊಂಡು ಬೇರೆಯವರ ಮೊಬೈಲ್‍ಗಳಿಗೆ ಹಾಡುಗಳನ್ನು ಡೌನ್‍ಲೋಡ್ ಮಾಡಿಕೊಡುತ್ತಿದ್ದನು.

ರಾತ್ರಿ 10 ಗಂಟೆ ಸಮಯದಲ್ಲಿ ಸ್ನೇಹಿತ ನರಸಿಂಹಯ್ಯ ಬಂದು ಲೋಕೇಶ್‍ನನ್ನು ಮಾತನಾಡಿಸಿ ಹೋಗಿದ್ದಾನೆ. ಮಧ್ಯರಾತ್ರಿ ಆರೇಳು ಮಂದಿಯ ಗುಂಪು ಏಕಾಏಕಿ ಲೋಕೇಶ್ ಮನೆಯ ಬಾಗಿಲು ಒಡೆದು ಒಳನುಗ್ಗಿ ಮಚ್ಚು ಮತ್ತು ಲಾಂಗ್‍ಗಳಿಂದ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಅಕ್ಕಪಕ್ಕದವರು ಕುಟುಂಬದವರ ಗಲಾಟೆ ಇರಬಹುದೆಂದು ಮಧ್ಯರಾತ್ರಿ ಯಾರೂ ಹೊರಬಂದಿಲ್ಲ. ಇಂದು ಮುಂಜಾನೆ 4.30ರಲ್ಲಿ ಇವರ ಮನೆಗೆ ಹಾಲು ಹಾಕಲು ಬಂದ ವ್ಯಕ್ತಿ ಬಾಗಿಲ ಬಳಿ ರಕ್ತ ಇರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಡಿವೈಎಸ್‍ಪಿ ವೆಂಕಟೇಶ್‍ನಾಯ್ಡು, ವೃತ್ತ ನಿರೀಕ್ಷಕ ರಂಗಸ್ವಾಮಿ, ಸಬ್‍ಇನ್ಸ್‍ಪೆಕ್ಟರ್ ನದಾಫ್ ಸ್ಥಳಕ್ಕೆ ಭೇಟಿ ನೀಡಿ ಬಾಗಿಲು ತಳ್ಳಿ ನೋಡಿದಾಗ ರಕ್ತದ ಮಡುವಿನಲ್ಲಿ ಲೋಕೇಶ್ ಕೊಲೆಯಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.

ಹಣಕಾಸಿನ ವ್ಯವಹಾರ ಅಥವಾ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚೇಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Facebook Comments

Sri Raghav

Admin