ಹುಲಿ-ಮೇಕೆ ಅಪೂರ್ವ ಸ್ನೇಹಕ್ಕೆ ಸಾಕ್ಷಿಯಾದ ಸಫಾರಿ ಪಾರ್ಕ್

ಈ ಸುದ್ದಿಯನ್ನು ಶೇರ್ ಮಾಡಿ

Tiger--01

ಇದು ಪ್ರೀತಿ ಮತ್ತು ಗೆಳೆತನದ ಒಂದು ವಿಸ್ಮಯ ಕಥೆ. ರಷ್ಯಾದ ಪ್ರಿಮೊರ್‍ಸ್ಕಿ ಸಫಾರಿ ಪಾರ್ಕ್‍ನಲ್ಲಿ ತನ್ನ ಪುಷ್ಕಳ ಭೋಜನಕ್ಕಾಗಿ ಇರಿಸಲಾಗಿದ್ದ ಒಂದು ಮೇಕೆ ಜೊತೆ ಅಪರೂಪದ ಅಮುರ್ ಹುಲಿಗೆ ಸ್ನೇಹ ಬೆಳೆದ ಪರಿ ಅಚ್ಚರಿ ಮೂಡಿಸುತ್ತದೆ. ಇದು ವಿಚಿತ್ರ ಆದರೂ ವಾಸ್ತವ ಸಂಗತಿ ಹುಲಿ-ಮೇಕೆ ನಡುವೆ ಅಪೂರ್ವ ಸ್ನೇಹಕ್ಕೆ ರಷ್ಯಾದ ಪ್ರಿಮೊರ್‍ಸ್ಕಿ ಸಫಾರಿ ಪಾರ್ಕ್ ಸಾಕ್ಷಿಯಾಗಿದೆ. ತನ್ನನ್ನು ಭಕ್ಷಿಸಲಿದ್ದ ಹುಲಿ ಜೊತೆ ಸ್ನೇಹ ಬೆಳೆಸಿದ ಈ ಮೇಕೆ ಧೈರ್ಯಕ್ಕಾಗಿ ಅದಕ್ಕೆ ಟಿಮುರ್ ಎಂದು ಹೆಸರಿಡಲಾಗಿದೆ. ಈ ಹುಲಿ ಜೊತೆ ಹಿಮದಲ್ಲಿ ಆಟವಾಡುತ್ತಿದ್ದ ಮೇಕೆಯ ಚಲನವಲನವನ್ನು ಸಿಬ್ಬಂದಿ ಕೆಲವು ದಿನ ವೀಕ್ಷಿಸಿದರು.

ಸಫಾರಿ ಪಾರ್ಕ್‍ನ ಸಿಬ್ಬಂದಿ ಹುಲಿ-ಮೇಕೆ ಸ್ನೇಹದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹುಲಿ ಸಾಮಾನ್ಯವಾಗಿ ವಾರಕ್ಕೆ ಎರಡು ಬಾರಿ ಜೀವಂತ ಮೇಕೆಗಳು ಮತ್ತು ಮೊಲಗಳನ್ನು ಯಾವುದೇ ಮುಲಾಜಿಲ್ಲದೇ ಭಕ್ಷಿಸುತ್ತದೆ. ಆದರೆ ಈ ಮೇಕೆಯನ್ನು ತಿನ್ನದೇ ಅದೊಂದಿಗೆ ಗೆಳೆತನ ಬೆಳೆಸಿರುವುದು ಮೃಗಾಲಯದಲ್ಲಿ ವಿಸ್ಮಯಕ್ಕೆ ಕಾರಣವಾಗಿದೆ.

ಈ ಸಫಾರಿ ಪಾರ್ಕ್‍ನಲ್ಲಿ ಅಪರೂಪದ ಹುಲಿಗಳನ್ನು ಬೆಳೆಸುವ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದ್ದು, ಇದರ ಭಾಗವಾಗಿ ಅವುಗಳು ಪ್ರಾಣಿಗಳನ್ನು ಸಹಜವಾಗಿ ಬೇಟೆಯಾಡುವ ಅವಕಾಶವನ್ನು ಸಹ ಒದಗಿಸಲಾಗುತ್ತಿದೆ. ಈ ಹುಲಿ ಕೆಲವು ವರ್ಷಗಳಿಂದ ಆಡು, ಮೇಕೆಗಳನ್ನು ಬೇಟೆಯಾಡಿ ಕೊಂದು ಅವುಗಳನ್ನು ಭಕ್ಷಿಸುತ್ತಿರುವಾಗ ಟಿಮುರ್ ಮೇಕೆ ಜೊತೆ ಸ್ನೇಹ ಬೆಳೆಸಿರುವುದು ಅತ್ಯಂತ ಅಸಾಧಾರಣ ಸಂಗತಿಯಾಗಿದೆ. ಈ ಎರಡೂ ಪ್ರಾಣಿಗಳಿಗೂ ಪ್ರತಿದಿನ ಆಹಾರ ಪೂರೈಸುತ್ತಿದ್ದು, ಅವುಗಳ ಸ್ನೇಹ ಮುಂದುವರೆಯಲು ಹಾಗೂ ರಕ್ತಪಾತದ ಅಂತ್ಯವ ನ್ನು ತಪ್ಪಿಸಲು ಸಿಬ್ಬಂದಿ ನೆರವಾಗುತ್ತಿದ್ದಾರೆ. ಸಿಬ್ಬಂದಿಯು ದಿನನಿತ್ಯ ಅಮುರ್ ಹುಲಿ- ಟಿಮುರ್ ಮೇಕೆಯ ಗೆಳೆತನದ ಬಗ್ಗೆ ಗಮನಿಸುತ್ತಿದ್ದಾರೆ.

ಮೇಕೆಯ ರಕ್ಷಣೆಗೆ ನಿಂತಿರುವ ಹುಲಿಯು ಅದರತ್ತ ಮೃಗಾಲಯ ಸಿಬ್ಬಂದಿ ಹೋದರೆ ಘರ್ಜಿಸಿ ಎಚ್ಚರಿಕೆ ನೀಡುತ್ತದೆ. ಈ ಎರಡು ಪ್ರಾಣಿಗಳ ಅಪೂರ್ವ ಸ್ನೇಹ ನೋಡಿದ ಪ್ರಾಣಿ ಪ್ರಿಯರು ಎಚ್ಚರಿಕೆ ನೀಡುವ ಅಮುರ್ ಮತ್ತು ಧೈರ್ಯವಂತ ಟಿಮುರ್ ಎಂದು ಬಣ್ಣಿಸುತ್ತಿದ್ದಾರೆ.

Facebook Comments

Sri Raghav

Admin