ಐಟಿ ಅಧಿಕಾರಿಗಳು ನನ್ನ ಸಂಸ್ಥೆಗಳ ಯಾವುದೇ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ : ಡಿಕೆಶಿ

DK-Shivakumar--01

ಬೆಂಗಳೂರು, ಆ.10- ಆದಾಯ ತೆರಿಗೆ ಅಧಿಕಾರಿಗಳು ನನ್ನ ವೈಯಕ್ತಿಕ ಮತ್ತು ನನ್ನ ಸಂಸ್ಥೆಗೆ ಸೇರಿದ ಯಾವುದೇ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ಸದಾಶಿವನಗರದಲ್ಲಿರುವ ತಮ್ಮ ಮನೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸೇರಿದ ಹಲವಾರು ಸಂಸ್ಥೆಗಳಿವೆ. ಈ ಸಂಸ್ಥೆಗಳಲ್ಲಿ ಪ್ರತಿ ದಿನ ವಹಿವಾಟು ನಡೆಯಲಿವೆ. ಪ್ರತಿ ಸಂಸ್ಥೆಗೂ ತಮ್ಮದೇ ಆದ ಖಾತೆಗಳಿವೆ. ನನಗೆ ವೈಯಕ್ತಿಕ ಖಾತೆಗಳಿವೆ. ಆದಾಯ ತೆರಿಗೆ ದಾಳಿಯ ನಂತರ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬ ಮಾಹಿತಿ ಸರಿಯಲ್ಲ. ಈವರೆಗೂ ನನ್ನ ಯಾವ ಖಾತೆಗಳು ಜಪ್ತಿಯಾಗಿಲ್ಲ ಎಂದರು.

ನಮ್ಮ ದೈನಂದಿನ ವ್ಯವಹಾರಗಳು ಎಂದಿನಂತೆ ನಡೆಯುತ್ತಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ನನಗೆ ಯಾವುದೇ ನೋಟಿಸ್ ನೀಡಿಲ್ಲ. ವೈಯಕ್ತಿಕವಾಗಿ ನಾನೇ ಕೆಲವು ಸ್ಪಷ್ಟನೆಗಳನ್ನು ನೀಡಬೇಕಿರುವುದರಿಂದ ಇಂದು ಆದಾಯ ತೆರಿಗೆ ಇಲಾಖೆ ಕಚೇರಿಗೆ ಭೇಟಿ ನೀಡುತ್ತಿದ್ದೇನೆ ಎಂದರು. ನಾನೇ ಖುದ್ದಾಗಿ ಭೇಟಿ ನೀಡುತ್ತಿದ್ದೇನೆ. ಇದರ ಹೊರತಾಗಿ ಯಾವುದೇ ನೋಟಿಸ್ ಬಂದಿಲ್ಲ. ವಿಚಾರಣೆಗೆ ಹಾಜರಾಗುವಂತೆ ಯಾರೂ ನನ್ನನ್ನು ಕರೆದಿಲ್ಲ ಎಂದು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಇಂದು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಠಗಳು ರಾಜಕೀಯೇತರ ಸಂಸ್ಥೆಗಳಾಗಿವೆ. ಅಲ್ಲಿಗೆ ಯಾವುದೇ ಪಕ್ಷದ ನಾಯಕರಾದರೂ ಭೇಟಿ ನೀಡಬಹುದು. ನಾನು ಕೂಡ ಸಿದ್ದಗಂಗೆ, ಸುತ್ತೂರು ಮಠಕ್ಕೆ ಭೇಟಿ ನೀಡುತ್ತೇನೆ. ಹಾಗೆಂದ ಮಾತ್ರಕ್ಕೆ ಅದಕ್ಕೆ ರಾಜಕೀಯ ಬಣ್ಣ ಬಳಿಯಲು ಸಾಧ್ಯವಿಲ್ಲ ಎಂದು ಹೇಳಿದರು. ಗುಜರಾತ್ ವಿಧಾನಸಭೆ ಚುನಾವಣೆಯ ಉಸ್ತುವಾರಿಗೆ ಡಿ.ಕೆ.ಶಿವಕುಮಾರ್ ಅವರನ್ನು ನೇಮಿಸಲಾಗುತ್ತಿದೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ನಾನು ನನ್ನ ಪಾಡಿಗೆ ಇದ್ದೇನೆ. ನನ್ನನ್ನು ಹಾಗೇ ಇರಲು ಬಿಡಿ. ಯಾವುದರಲ್ಲೂ ಸಿಕ್ಕಿಸಬೇಡಿ ಎಂದರು.

Facebook Comments

Sri Raghav

Admin