ಒಂದಾದ ಎಐಎಡಿಎಂಕೆಯ ಬಣಗಳು, ಪನ್ನೀರ್‍ಸೆಲ್ವಂಗೆ ಡಿಸಿಎಂ ಪಟ್ಟ, ಚಿನ್ನಮ್ಮನಿಗೆ ಹಿನ್ನಡೆ

Sasikala--01

ಚೆನ್ನೈ, ಆ.10- ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಉತ್ತರ ಮತ್ತು ದಕ್ಷಿಣ ದಿಕ್ಕಿನತ್ತ ಮುಖ ಮಾಡಿದ್ದ ಎಐಎಡಿಎಂಕೆಯ ಉಭಯ ಬಣಗಳು ಮಹತ್ವದ ಬೆಳವಣಿಗೆಯೊಂದರಲ್ಲಿ ವಿಲೀನವಾಗುವ ಪ್ರಕ್ರಿಯೆ ಚುರುಕುಗೊಂಡಿದೆ. ಇದಕ್ಕೆ ಪೂರಕವಾಗಿ ಎಐಎಡಿಎಂಕೆ (ಅಮ್ಮಾ) ಬಣದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಶಿಕಲಾ ನಟರಾಜನ್ ಅವರನ್ನು ಕೆಳಗಿಳಿಸಲು ನಿರ್ಧರಿಸಲಾಗಿದೆ.  ಈ ಬೆಳವಣಿಗೆಯಿಂದಾಗಿ ಈಗಾಗಲೇ ಜೈಲಿನಲ್ಲಿರುವ ಶಶಿಕಲಾ ನಟರಾಜನ್ ಅವರಿಗೆ ಭಾರೀ ಹಿನ್ನಡೆಯಾಗಿದೆ. ಚೆನ್ನೈನಲ್ಲಿಂದು ಮುಖ್ಯಮಂತ್ರಿ ಯಡಪ್ಪಾಡಿ ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಶಿಕಲಾ ಅವರನ್ನು ಪಕ್ಷದ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಸುವ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಹೊಸ ಮುಖ್ಯಸ್ಥರು ನೇಮಕವಾಗುವ ತನಕ ಮಾತ್ರವೇ ಶಶಿಕಲಾ ನಟರಾಜನ್ ಕಾರ್ಯದರ್ಶಿಯಾಗಿರುತ್ತಾರೆ. ಎಐಎಡಿಎಂಕೆ ನೂತನ ಪ್ರಧಾನ ಕಾರ್ಯದರ್ಶಿ ಆಯ್ಕೆ ನಂತರ ಅವರ ಸ್ಥಾನ ಅನೂರ್ಜಿತವಾಗಲಿದೆ ಎಂಬ ಮಹತ್ವದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದೇ ವೇಳೆ ಶಶಿಕಲಾ ಅವರ ಕೃಪಾಕಟಾಕ್ಷದಿಂದ ಉಪಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಟಿ.ಟಿ.ವಿ.ದಿನಕರನ್ ಅವರ ಸ್ಥಾನಕ್ಕೂ ಚ್ಯುತಿ ಉಂಟಾಗಲಿದೆ. ದಿನಕರನ್ ಅವರ ನೇಮಕವು ಬೈಲಾಗಳಿಗೆ ವಿರುದ್ಧವಾಗಿದೆ. ಅಲ್ಲದೆ, ಅವರ ಹುದ್ದೆಯು ಪಕ್ಷದಲ್ಲಿ ಭಾರೀ ಗೊಂದಲ ಸೃಷ್ಟಿಸಿದೆ. ಹೀಗಾಗಿ ಅವರನ್ನು ಅನರ್ಹಗೊಳಿಸುವುದು ಸೂಕ್ತ ಎಂಬ ಗೊತ್ತುವಳಿಯನ್ನು ಸಹ ಸಭೆಯಲ್ಲಿ ಅಂಗೀಕರಿಸಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪಕ್ಷದ ನಾಯಕಿ ಶಶಿಕಲಾ ನಟರಾಜನ್ ಮತ್ತು ಟಿ.ಟಿ.ವಿ.ದಿನಕರನ್ ಅವರನ್ನು ಸಂಘಟನೆಯಿಂದ ದೂರವಿಡುವ ಉದ್ದೇಶದಿಂದ ಎಐಎಡಿಎಂಕೆ (ಅಮ್ಮಾ) ಬಣ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದರಿಂದ ಉಭಯ ಬಣಗಳು ವಿಲೀನಗೊಳ್ಳುವುದು ಸನ್ನಿಹಿತವಾಗಿದೆ.

ಹೊಸ ಸೂತ್ರದ ಪ್ರಕಾರ, ಯಡಪ್ಪಾಡಿ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಮತ್ತೊಂದು ಬಣದ ಮುಖ್ಯಸ್ಥರಾದ ಮಾಜಿ ಮುಖ್ಯಮಂತ್ರಿ ಓ.ಪನ್ನೀರ್‍ಸೆಲ್ವಂ ಉಪಮುಖ್ಯಮಂತ್ರಿಯಾಗಲಿದ್ದಾರೆ. ಅಲ್ಲದೆ, ಪನ್ನೀರ್‍ಸೆಲ್ವಂ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಹಣಕಾಸು ಮತ್ತು ಲೋಕೋಪಯೋಗಿ ಖಾತೆಯನ್ನೂ ನೀಡಲು ಉದ್ದೇಶಿಸಲಾಗಿದೆ.  ಪನ್ನೀರ್‍ಸೆಲ್ವಂ ಅವರೊಂದಿಗೆ ಅವರ ಪರಮಾಪ್ತರಾದ ಮಫೋಯಿ ಕೆ.ಪಾಂಡಿಯರಾಜನ್ ಮತ್ತು ಸೆಮ್ಮುಲೈ ಅವರಿಗೆ ಸಂಪುಟ ಸ್ಥಾನಮಾನ ದೊರೆಯಲಿದೆ. ಇದೇ ಉದ್ದೇಶಕ್ಕಾಗಿ ಪಳನಿಸ್ವಾಮಿಯವರು ಪ್ರಸ್ತುತ ತಮ್ಮ ಮಂತ್ರಿಮಂಡಲದಲ್ಲಿರುವ ಇಬ್ಬರು ನಿಷ್ಕ್ರಿಯ ಸಚಿವರನ್ನು ಕೈಬಿಟ್ಟು ಪನ್ನೀರ್ ಸೆಲ್ವಂ ಬಣದ ಇಬ್ಬರನ್ನು ಸೇರಿಸಿಕೊಳ್ಳಲಿದ್ದಾರೆ.

ಇನ್ನೆರಡು ದಿನಗಳಲ್ಲಿ ಪನ್ನೀರ್‍ಸೆಲ್ವಂ ಅವರು ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನು ಭೇಟಿ ಮಾಡಿದ ನಂತರ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.  ಕಳಂಕಪೀಡಿತರಾದ ಶಶಿಕಲಾ ನಟರಾಜನ್ ಮತ್ತು ದಿನಕರನ್ ಅವರನ್ನು ಪಕ್ಷದಿಂದ ದೂರವಿರಿಸಿ ಎಐಎಡಿಎಂಕೆ ವರ್ಚಸ್ಸನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಣ್ಣಾ ಡಿಎಂಕೆ ಎರಡೂ ಬಣಗಳು ಒಗ್ಗೂಡಿ ಮುಖ್ಯಮಂತ್ರಿಯಾಗಿದ್ದ ದಿ.ಜಯಲಲಿತಾ ಅವರ ಆಶೋತ್ತರದಂತೆ ಪಕ್ಷವನ್ನು ರಾಜ್ಯದಲ್ಲಿ ಮತ್ತಷ್ಟು ಬಲಪಡಿಸಲು ಪಳನಿಸ್ವಾಮಿ ಮತ್ತು ಪನ್ನೀರ್‍ಸೆಲ್ವಂ ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಎರಡೂ ಬಣಗಳು ಒಗ್ಗೂಡುತ್ತಿರುವುದರಿಂದ ಪಕ್ಷಕ್ಕೆ ಆನೆಬಲ ಲಭಿಸಿದ್ದು, ಮುಂಬರುವ ಚುನಾವಣೆಗಳಲ್ಲಿ ಎಐಎಡಿಎಂಕೆಗೆ ಭದ್ರ ಬುನಾದಿಯಾಗಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

Facebook Comments

Sri Raghav

Admin