ಡಿಎಂಕೆ ಪಕ್ಷದ ವಜ್ರ ಮಹೋತ್ಸವದಲ್ಲಿ ಕಮಲ್-ರಜನಿ ಮಿಂಚು

Kamal-And-Rajni--01

ಚೆನ್ನೈ, ಆ.10- ತಮಿಳುನಾಡಿನಲ್ಲಿ ಅತ್ತ ಅಣ್ಣಾ ಡಿಎಂಕೆಯ ಉಭಯ ಬಣಗಳು ವಿಲೀನಗೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದರೆ. ಇತ್ತ ವಿರೋಧ ಪಕ್ಷವಾದ ಡಿಎಂಕೆ ಇಂದು ವಜ್ರ ಮಹೋತ್ಸವ (75ನೇ ಸಂಸ್ಥಾಪನಾ ದಿನಾಚರಣೆ) ಆಚರಿಸಿಕೊಳ್ಳಲು ಸಜ್ಜಾಗಿದೆ. ತಮಿಳು ಚಿತ್ರರಂಗದ ಖ್ಯಾತ ನಟರಾದ ರಜನಿಕಾಂತ್ ಮತ್ತು ಕಮಲಹಾಸನ್ ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮತ್ತು ಕುತೂಹಲ ಕೆರಳಿಸಿದೆ. ಆಡಳಿತಾರೂಢ ಎಐಎಡಿಎಂಕೆ ಈಗಾಗಲೇ ತಿರುಗಿ ಬಿದ್ದಿರುವ ನಟ ಕಮಲಹಾಸನ್, ಆ ಪಕ್ಷದ ಸಚಿವರ ವಿರುದ್ಧ ಬಹಿರಂಗ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಅಲ್ಲದೆ, ರಾಜಕೀಯ ರಂಗ ಪ್ರವೇಶಿಸುವ ಬಗ್ಗೆಯೂ ಮುನ್ಸೂಚನೆ ನೀಡಿದ್ದಾರೆ.

ಹೀಗಾಗಿ ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ಕಮಲಹಾಸನ್ ಅವರು ಮಾಡುವ ಭಾಷಣ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಲಿದೆ. ಡಿಎಂಕೆ ಬಗ್ಗೆ ಮೊದಲಿನಿಂದಲೂ ಒಲವು ಹೊಂದಿರುವ ಕಮಲಹಾಸನ್ ಇತ್ತೀಚಿನ ದಿನಗಳಲ್ಲಿ ಎಐಎಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿರುವುದರಿಂದ ಅವರು ಡಾ.ಎಂ.ಕರುಣಾನಿಧಿ ನೇತೃತ್ವದ ಪಕ್ಷವನ್ನು ಸೇರ್ಪಡೆಯಾಗುವ ಸಾಧ್ಯತೆ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ರಜನಿಕಾಂತ್‍ಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಅವರು ಕಾರ್ಯಕ್ರಮಕ್ಕೆ ಹಾಜರಾಗುವ ನಿರೀಕ್ಷೆ ಇದೆಯಾದರೂ ಅವರು ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ತುಟಿ ಬಿಚ್ಚುವ ಸಾಧ್ಯತೆ ಇಲ್ಲ. ಒಟ್ಟಾರೆ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿರುವ ರಜನಿಕಾಂತ್ ಹಾಗೂ ಕಮಲ್ ಅವರ ಮುಂದಿನ ನಡೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಲಿದೆ.

Facebook Comments

Sri Raghav

Admin