ಬೆಂಗಳೂರಿನಲ್ಲಿ ನಾಡದೇವತೆ ಭುವನೇಶ್ವರಿ ವಿಗ್ರಹ ಸ್ಥಾಪನೆಗೆ ಮುಂದಾದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Bhuvaneshwari--01

ಬೆಂಗಳೂರು,ಆ.10-ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ಕೂಗು ಎದ್ದಿರುವ ಬೆನ್ನಲ್ಲೇ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ನಾಡದೇವತೆ ಭುವನೇಶ್ವರಿ ವಿಗ್ರಹವನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ನಾಡದೇವತೆ ಭುವನೇಶ್ವರಿ ವಿಗ್ರಹ ಸ್ಥಾಪನೆ ಮಾಡುವ ಸಂಬಂಧ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಲು ತೀರ್ಮಾನಿಸಿದೆ. ಈ ಸಮಿತಿಯು ವರದಿ ಕೊಟ್ಟ ಬಳಿಕ ಸೂಕ್ತ ಸ್ಥಳದಲ್ಲಿ ಸುಮಾರು 10 ಅಡಿ ಎತ್ತರದ ಕಂಚಿನ ಭುವನೇಶ್ವರಿದೇವಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಗ್ರಹ ಸ್ಥಾಪನೆಗೆ 25 ಕೋಟಿ ಹಣ ಮೀಸಲಿಟ್ಟಿದ್ದರು.

ಪದೇ ಪದೇ ಗಡಿ ವಿವಾದ ಕ್ಯಾತೆ ತೆಗೆಯುತ್ತಿದ್ದ ಮರಾಠಿಗರಿಗೆ ಬಿಸಿ ಮುಟ್ಟಿಸಲೆಂದೇ ಬೆಳಗಾವಿಯಲ್ಲಿ 2ನೇ ವಿಶ್ವ ಕನ್ನಡ ಸಮ್ಮೇಳನವನ್ನು 25 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ನಡೆಸಲಾಗಿತ್ತು.  ಇದೀಗ ದಾವಣಗೆರೆಯಲ್ಲಿ ಬರುವ ಡಿಸೆಂಬರ್ ತಿಂಗಳಿಗೆ ಮೂರನೇ ವಿಶ್ವಕನ್ನಡ ಸಮ್ಮೇಳನ ನಡೆಯಲಿದ್ದು , ಆ ವೇಳೆಗಾಗಲೇ ಬೆಂಗಳೂರಿನಲ್ಲಿ ನಾಡದೇವತೆ ಪ್ರತಿಷ್ಠಾಪನೆಯಾಗಬೇಕೆಂದು ಕೆಲ ಕನ್ನಡ ಸಾಹಿತಿಗಳು, ಬರಹಗಾರರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಕಸಾಪ ಮಾಜಿ ಅಧ್ಯಕ್ಷ ಜಿ.ಎಸ್.ಸಿದ್ದಲಿಂಗಯ್ಯ, ಗೊ.ರು.ಚನ್ನಬಸಪ್ಪ , ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಹಿತಿ ಚಂಪಾ, ಶೇಷಗಿರಿರಾವ್ ಸೇರಿದಂತೆ ಅನೇಕರು ನಾಡದೇವಿಯ ವಿಗ್ರಹ ಸ್ಥಾಪನೆಗೆ ಕೋರಿದ್ದಾರೆ.   ಈಗಾಗಲೇ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆ ಪ್ರತ್ಯೇಕ ನಾಡದೇವತೆ ಇರುವುದರಿಂದ ರಾಜ್ಯಕ್ಕೂ ಭುವನೇಶ್ವರಿ ವಿಗ್ರಹವನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಲಹೆ ಮಾಡಿದ್ದಾರೆ.  ಸದ್ಯಕ್ಕೆ ಕರ್ನಾಟಕದಲ್ಲಿ ಎರಡು ಕಡೆ ಮಾತ್ರ ನಾಡದೇವಿ ಭುವನೇಶ್ವರಿಯ ದೇವಸ್ಥಾನಗಳಿವೆ. ಹಂಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕಾಣಬಹುದು.

ಕನ್ನಡಿಗರ ಮೊದಲ ರಾಜವಂಶಸ್ಥರೆನಿಸಿದ ಬನವಾಸಿ ಕದಂಬರು ಭುವನೇಶ್ವರಿಯನ್ನು ನಾಡದೇವಿಯನ್ನಾಗಿ ಸ್ವೀಕರಿಸಿದ್ದರು. ಅಂದಿನಿಂದ ಈವರೆಗೂ ಭುವನೇಶ್ವರಿಯನ್ನು ಕನ್ನಡಿಗರು ನಾಡದೇವಿ ಎಂದೇ ಪರಿಗಣಿಸುತ್ತಾರೆ.  ಈ ಹಿಂದೆ ಬೆಂಗಳೂರಿನಲ್ಲಿ ವಿಗ್ರಹ ಸ್ಥಾಪನೆಗೆ ಬೇಡಿಕೆ ಕೇಳಿಬಂದಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಇದಕ್ಕಾಗಿ ಹಣ ಮೀಸಲಿಟ್ಟಿದ್ದರು. ಅವರ ರಾಜೀನಾಮೆ ಬಳಿಕ ಅಧಿಕಾರ ನಡೆಸಿದ ಯಾವುದೇ ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿರಲಿಲ್ಲ.

ಇದೀಗ ಪುನಃ ಬೇಡಿಕೆ ಕೇಳಿಬಂದಿರುವುದರಿಂದ ರಾಜ್ಯ ಸರ್ಕಾರ ಸೂಕ್ತ ಕೈಗೊಳ್ಳುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದಷ್ಟೇ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬುದರ ಬಗ್ಗೆ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು.

Facebook Comments

Sri Raghav

Admin