ಅಧಿಕಾರ ಅನುಭವಿಸಿ ಕೆಳಗಿಳಿಯುವಾಗ ಅಭದ್ರತೆ ಮಾತು ಎಷ್ಟು ಸರಿ ಅನ್ಸಾರಿ ಜೀ..?

ಈ ಸುದ್ದಿಯನ್ನು ಶೇರ್ ಮಾಡಿ

Hameed-Ansari--01

ದೇಶದಲ್ಲಿ ಎಲ್ಲವೂ ಸರಿಯಾಗಿದ್ದರೂ ಕೆಲವರಿಗೆ ಇದನ್ನು ಸಹಿಸಲಾಗುವುದಿಲ್ಲ. ಏನಾದರೂ ಒಂದು ಕಿಡಿಯನ್ನು ಹಚ್ಚಲೇಬೇಕು ಎಂದು ಹಪಹಪಿಸುತ್ತಿರುತ್ತಾರೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ನಿರ್ಗಮಿತ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ.  ಕಳೆದ 10 ವರ್ಷಗಳಿಂದ ಈ ದೇಶದ ಎರಡನೆ ಅತ್ಯುನ್ನತ ಹುದ್ದೆಯಾದ ಉಪರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿ ಸಕಲ ಸವಲತ್ತನ್ನೂ ಅನುಭವಿಸಿ ಕೊನೆಗೆ ಅಧಿಕಾರದಿಂದ ಕೆಳಗಿಳಿಯುವಾಗ ಅವರು ಆಡಿರುವ ಮಾತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ತೀವ್ರ ಮುಜುಗರವನ್ನುಂಟುಮಾಡಿರುವುದು ಸತ್ಯ.

ನಿನ್ನೆ ದೆಹಲಿಯಲ್ಲಿ ಹಮೀದ್ ಅನ್ಸಾರಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹಮೀದ್ ಅನ್ಸಾರಿ ಅವರು ದೇಶದಲ್ಲಿ ಮುಸ್ಲಿಮರು ಅಭದ್ರತೆಯ ತಲ್ಲಣ ಅನುಭವಿಸುತ್ತಿದ್ದಾರೆ ಮತ್ತು ಆತಂಕದಿಂದ ಬದುಕುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಯಂತಹ ಮಹೋನ್ನತ ಸ್ಥಾನದಿಂದ ನಿರ್ಗಮಿಸುತ್ತಿರುವ ಒಬ್ಬ ವ್ಯಕ್ತಿಗೆ ಈ ಮಾತುಗಳು ಭೂಷಣವೇ..? ಇದನ್ನು ಅವರು ಯೋಚಿಸಬೇಕಾಗಿತ್ತು. ಒಂದು ವೇಳೆ ದೇಶದಲ್ಲಿ ಅಂತಹ ಪರಿಸ್ಥಿತಿ ಇದ್ದದ್ದೇ ಆಗಿದ್ದರೆ ಅವರು 10 ವರ್ಷಗಳಿಂದಲೂ ಕುರ್ಚಿಗೆ ಅಂಟಿಕೊಂಡಿದ್ದೇಕೆ..?
ಅವರಿಗೆ ಇಂತಹ ಘಟನೆಗಳನ್ನು ಖಂಡಿಸುವ ಮತ್ತು ನಿಯಂತ್ರಿಸುವ ಶಕ್ತಿ ಮತ್ತು ಜವಾಬ್ದಾರಿ ಎರಡೂ ಇದ್ದವು. ಆದರೆ, ಅವರು ಆ ಕೆಲಸ ಮಾಡಲಿಲ್ಲ, ಅಧಿಕಾರವನ್ನೂ ಬಿಡಲಿಲ್ಲ. ಪ್ರಸ್ತುತ ಕುರ್ಚಿಯಿಂದ ಕೆಳಗಿಳಿಯುವಾಗ ಸಮಾಜದಲ್ಲಿ ಕೋಮು ವಿದ್ವೇಶವನ್ನು ಬಿತ್ತುವಂತಹ ಕುತ್ಸಿತ ಹೇಳಿಕೆಯನ್ನು ಏತಕ್ಕಾಗಿ ಅವರು ನೀಡಿದರು..? ಇದರ ಹಿಂದೆ ಯಾರದಾದರೂ ಪ್ರಭಾವ ಇದೆಯೇ..? ಒತ್ತಡ ಇದೆಯೇ..? ಇವುಗಳನ್ನೆಲ್ಲ ಅರ್ಥ ಮಾಡಿಕೊಳ್ಳದಷ್ಟು ಜನ ದಡ್ಡರೇನಲ್ಲ..?

ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಉನ್ನತ ವ್ಯಕ್ತಿಯೊಬ್ಬರು ಇಂತಹ ಮಾತುಗಳನ್ನಾಡಿದರೆ ಅದು ದೇಶವಾಸಿಗಳ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಅವರು ಒಂದು ಕ್ಷಣ ಯೋಚಿಸಬೇಕಾಗಿತ್ತು. ಅನ್ಸಾರಿ ಅವರು ಕೂಡ ಈ ಹಿಂದೆ ಎಂದೂ ತೂಕ ತಪ್ಪಿ ಮಾತನಾಡಿದವರಲ್ಲ. ಉಪರಾಷ್ಟ್ರಪತಿಯಾಗಿ, ರಾಜ್ಯಸಭೆಯ ಸಭಾಪತಿಗಳೂ ಆಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದವರು.  ಅಷ್ಟೇ ಅಲ್ಲ, ದಿವಂಗತ ರಾಷ್ಟ್ರಪತಿ ಮಹಾನ್ ವಿಜ್ಞಾನಿ ಮತ್ತು ಮಾನವತಾವಾದಿ ಅಬ್ದುಲ್ ಕಲಾಂರಂತಹ ಮಹೋನ್ನತ ವ್ಯಕ್ತಿಯನ್ನು ಎದುರಿಗಿಟ್ಟುಕೊಂಡು ಬೆಳೆದವರು ಅನ್ಸಾರಿ. ಅವರಿಂದ ಯಾರೂ ಇಂತಹ ಲಘುವಾದ ಹೇಳಿಕೆ ನಿರೀಕ್ಷಿಸಿರಲಿಲ್ಲ.

ಪ್ರಧಾನಿ ಮೋದಿ:

ನಿಮಗೆ ಗೊತ್ತಿರಬಹುದು, ಇತ್ತೀಚೆಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕಾಲಿಗೆ ಚಕ್ರ ಕಟ್ಟಿಕೊಟ್ಟವರಂತೆ ವಿದೇಶ ಪ್ರವಾಸ ಮಾಡಿ, ಮುಖ್ಯವಾಗಿ ಅನೇಕ ಮುಸ್ಲಿಂ ರಾಷ್ಟ್ರಗಳನ್ನು ಸುತ್ತಿದ್ದಾರೆ. ಇಡೀ ಮುಸ್ಲಿಂ ಸಾಮ್ರಾಜ್ಯಗಳು ಭಾರತದಲ್ಲಿ ಸಹಿಷ್ಣುತೆ ಇರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿರುವ ಮುಸ್ಲಿಮರಿಗಿಂತ ಮುಸ್ಲಿಂ ರಾಷ್ಟ್ರಗಳಲ್ಲಿರುವ ಹಿಂದೂಗಳು ಸಂಕಷ್ಟದಲ್ಲಿದ್ದಾರೆ ಎಂಬುದನ್ನು ಇಡೀ ವಿಶ್ವವೇ ಒಪ್ಪುತ್ತದೆ.

ಪ್ರಧಾನಿ ಮೋದಿಯವರು ಇತ್ತೀಚೆಗೆ ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಸಾಮರಸ್ಯ, ಸೌಹಾರ್ದತೆ ಮೂಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಅವರ ಈ ಪ್ರಯತ್ನಕ್ಕೆ ಇಡೀ ಮುಸ್ಲಿಂ ಸಮುದಾಯ ಅವರನ್ನು ಪ್ರಶಂಸಿಸಿದೆ. ಮಾತ್ರವಲ್ಲ , ಮೋದಿ ಒಬ್ಬ ಈ ದೇಶದ ಮಹಾನ್ ಜಾತ್ಯತೀತ ನಾಯಕ ಎಂದು ಎಲ್ಲರೂ ಒಪ್ಪಿದ್ದಾರೆ.

ವಿಶೇಷವೆಂದರೆ, ಸ್ವಾತಂತ್ರ್ಯಾನಂತರದ ದಿನಗಳಿಂದಲೂ ನೆನೆಗುದಿಗೆ ಬಿದ್ದು ಅನೇಕ ವಿವಾದಗಳಿಗೆ ಕಾರಣವಾಗಿದ್ದ ಅಯೋಧ್ಯೆಯ ರಾಮಮಂದಿರ ವಿಷಯ ಕೂಡ ಒಂದು ಹಂತದಲ್ಲಿ ಬಗೆಹರಿಯುವ ಮುನ್ಸೂಚನೆಗಳು ಗೋಚರಿಸುತ್ತಿವೆ.  ದೇಶದಲ್ಲಿ ಅಲ್ಲಲ್ಲಿ ನಡೆದಿರುವ ಬೆರಳೆಣಿಕೆಯಷ್ಟು ಕೆಲವೇ ಸಣ್ಣಪುಟ್ಟ ಘಟನೆಗಳನ್ನು ದೊಡ್ಡದು ಮಾಡಿಕೊಂಡು, ಅವುಗಳನ್ನೇ ವೈಭವೀಕರಿಸುತ್ತ ಈ ರೀತಿ ಸಮಾಜದಲ್ಲಿ ಶಾಂತಿ ಕದಡುವಂತಹ ಹೇಳಿಕೆಗಳನ್ನು ನೀಡುವಾಗ ಯಾವುದೇ ನಾಯಕರು ಪೂರ್ವಾಗ್ರಹ ಇಟ್ಟುಕೊಳ್ಳಬಾರದು ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು.

ಹಮೀದ್ ಅನ್ಸಾರಿ ಅವರು ಉಪರಾಷ್ಟ್ರಪತಿಯಾಗಿ, ರಾಜ್ಯಸಭೆ ಸಭಾಪತಿಯಾಗಿ, ಪಕ್ಷಾತೀತವಾಗಿ, ರಾಜಕೀಯಾತೀತವಾಗಿ ಸಾಗಿ ಬಂದವರು. ಅಂತಹವರು ತಮ್ಮ ಅಧಿಕಾರಾವಧಿ ಮುಗಿದ ಸಂದರ್ಭ ಈ ರೀತಿ ಯಾಕಾಗಿ ಹೇಳಿದರು ಎಂಬುದನ್ನು ಯೋಚಿಸಬೇಕಾಗುತ್ತದೆ.  ಅನ್ಸಾರಿ ಅವರು ಕೂಡ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಈಗಾಗಲೇ ಅನ್ಸಾರಿ ಅವರ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ ಖಂಡನೆಗಳು ಕೇಳಿಬಂದಿವೆ. ತಮ್ಮ ಈ ಹೇಳಿಕೆಯನ್ನು ಅನ್ಸಾರಿ ಸಮರ್ಥಿಸಿಕೊಳ್ಳುತ್ತಾರೋ ಅಥವಾ ಹಿಂಪಡೆಯುತ್ತಾರೋ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin