ಕನ್ನಡ ಪತ್ರಿಕೆಯಲ್ಲಿ ಇಂಗ್ಲೀಷ್ ಜಾಹೀರಾತು ಸಲ್ಲದು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha--01

ಬೆಂಗಳೂರು, ಆ.11-ಕನ್ನಡ ಪತ್ರಿಕೆಗಳಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಜಾಹೀರಾತು ನೀಡುವುದು, ಅಂದಾಜು ಪಟ್ಟಿಗಳನ್ನು ಇಂಗ್ಲೀಷ್‍ನಲ್ಲಿ ಮಾಡುತ್ತಿರುವುದು ಕಂಡು ಬಂದಿದ್ದು, ಈ ಲೋಪವನ್ನು ತಿದ್ದಿಕೊಂಡು ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡ ಭಾಷೆಯನ್ನು ಅನುಷ್ಟಾನಗೊಳಿಸದೆ ಉದಾಸೀನ ಧೋರಣೆ ತಳೆದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಎಚ್ಚರಿಕೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ನೀಡಿದರು.

ವಿಕಾಸಸೌಧದಲ್ಲಿಂದು ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‍ಸಿಂಗ್ ಅವರ ಸಮ್ಮುಖದಲ್ಲಿ ಇಲಾಖೆಯಲ್ಲಿ ಕನ್ನಡ ಪ್ರಗತಿ ಪರಿಶೀಲನೆ ಮಾಡುತ್ತಾ ಅವರು ಈ ಎಚ್ಚರಿಕೆ ನೀಡಿದರು. ಇಲಾಖೆಯ ಟೆಂಡರ್, ಜಾಹೀರಾತು ಹಾಗೂ ದೈನಂದಿನ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು. ಇಂಗ್ಲೀಷ್ ಪತ್ರಿಕೆಗಳಲ್ಲೂ ಕನ್ನಡದಲ್ಲಿ ಜಾಹೀರಾತು ನೀಡಿದರೆ ಅಭ್ಯಂತರವಿಲ್ಲ. ಕನ್ನಡ ಪತ್ರಿಕೆಗಳಲ್ಲಿ ಕನ್ನಡದಲ್ಲೇ ಜಾಹೀರಾತು ನೀಡಬೇಕು ಎಂದರು.

ಪ್ರಾಧಿಕಾರಕ್ಕೆ ಪ್ರತಿ ತಿಂಗಳು ವಾಸ್ತವ ಮಾಹಿತಿ ನೀಡಬೇಕು. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ ದೊಡ್ಡ ಅಪರಾಧವಾಗಲಿದ್ದು, ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ತಿಳಿಸಿದ ಅವರು, ಇಲಾಖೆ ಮಟ್ಟದಲ್ಲಿ ಕನ್ನಡ ಅನುಷ್ಟಾನದ ತನಿಖಾ ತಂಡವನ್ನು ರಚಿಸಿ ಆ ತಂಡ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪರಿಶೀಲನಾ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಅವರು ಹೇಳಿದರು. ಜಾಗತಿಕ ಟೆಂಡರ್‍ಗಳೂ ಸಹ ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿರಬೇಕು. ಹೊರಗುತ್ತಿಗೆ ನೌಕರಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ವೆಬ್‍ಸೈಟ್‍ನಲ್ಲಿನ ತಂತ್ರಾಂಶದಲ್ಲಿ ಕನ್ನಡ ಬಳಕೆಯಾಗಬೇಕು. ಈ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿಕೊಂಡು ಅನುಪಾಲನಾ ವರದಿಯನ್ನು ಪ್ರಾಧಿಕಾರಕ್ಕೆ ನೀಡಬೇಕೆಂದು ಅವರು ಸೂಚಿಸಿದರು.

ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‍ಸಿಂಗ್ ಮಾತನಾಡಿ, ಇಲಾಖೆಯಲ್ಲಿ ಕನ್ನಡ ಅನುಷ್ಟಾನದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲಾಗುವುದು. ಸೆ.15ರೊಳಗೆ ಇಲಾಖೆ ವೆಬ್‍ಸೈಟನ್ನು ಬದಲಿಸಲಿದ್ದು, ಕನ್ನಡ ಭಾಷೆಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ದಲಿತ ಕವಿ ಸಿದ್ದಲಿಂಗಯ್ಯ ಮಾತನಾಡಿ, ಕನ್ನಡ ಪತ್ರಿಕೆಗಳಿಗೆ ಇಂಗ್ಲೀಷ್‍ನಲ್ಲಿ ಜಾಹೀರಾತು ನೀಡುವ ಪದ್ದತಿಗೆ ಅಂತ್ಯ ಹಾಡಬೇಕು. ಬಹಳ ಹಿಂದಿನಿಂದ ಈ ಪದ್ಧತಿ ನಡೆಯುತ್ತಿದ್ದು, ಮತ್ತೆ ಮುಂದುವರೆದರೆ ಅಕ್ಷಮ್ಯವಾಗಲಿದೆ. ಪ್ರಧಾನ ಕಾರ್ಯದರ್ಶಿಯವರು ಕನ್ನಡ ಭಾಷೆಯಲ್ಲೇ ಟಿಪ್ಪಣಿ ಬರೆಯುವ ಮೂಲಕ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾದರಿಯಾಗಿ ಕನ್ನಡ ಅನುಷ್ಠಾನ ವಿಚಾರದಲ್ಲಿ ಸಾರಥಿಯಾಗಬೇಕೆಂದು ಸೂಚಿಸಿದರು.

Facebook Comments

Sri Raghav

Admin