ನಾಳೆಯಿಂದ ಅಮಿತ್ ಷಾ ರಾಜ್ಯಪ್ರವಾಸ, ಬಿಜೆಪಿ ಪಾಳೆಯದಲ್ಲಿ ಮಿಂಚಿನ ಸಂಚಲನ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--0

ಬೆಂಗಳೂರು,ಆ.11-ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಕೈಗೊಳ್ಳಬೇಕಾದ ಕಾರ್ಯತಂತ್ರ ಹಾಗೂ ರಣತಂತ್ರ ರೂಪಿಸಲು ಬಿಜೆಪಿಯ ಚಾಣಕ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಳೆ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಬಹುದಿನಗಳ ನಂತರ ಕರ್ನಾಟಕಕ್ಕೆ ಅಮಿತ್ ಷಾ ಮೂರು ದಿನಗಳ ಪ್ರವಾಸ ಕೈಗೊಳ್ಳುತ್ತಿರುವುದು ಕಮಲ ಪಾಳೆಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.
ನಾಳೆ 10.40ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ನಿರ್ಮಲಾ ಸೀತಾರಾಮನ್, ಮುಖಂಡರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ಆರ್.ಅಶೋಕ್, ಅರವಿಂದ್ ಲಿಂಬಾವಳಿ ಸೇರಿದಂತೆ ಮತ್ತಿತರರು ಬರ ಮಾಡಿಕೊಳ್ಳಲಿದ್ದಾರೆ.

ಬಳಿಕ ಟೋಲ್‍ಗೇಟ್ ಬಳಿ ಅಮಿತ್ ಷಾ ಅವರನ್ನು ಪದಾಧಿಕಾರಿಗಳು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಲಿದ್ದಾರೆ. ನಂತರ 11 ಗಂಟೆಗೆ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು 1 ಗಂಟೆಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯವನ್ನು ಉದ್ಘಾಟಿಸುವರು.

ಕಮಲ ಪಾಳೆಯದಲ್ಲಿ ಸಂಚಲನ:

ಕಳೆದ ಹಲವು ತಿಂಗಳಿನಿಂದ ಆಂತರಿಕ ಕಚ್ಚಾಟದಿಂದಲೇ ನಲುಗಿದ್ದ ಬಿಜೆಪಿಗೆ ಅಮಿತ್ ಷಾ ಆಗಮಿಸುತ್ತಿರುವುದು ಕಮಲ ಪಾಳೆಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.  ರಾಜ್ಯಾಧ್ಯಕ್ಷ ಯಡಿಯೂರಪ್ಪ , ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವೆ ಪದಾಧಿಕಾರಿಗಳ ನೇಮಕಾತಿ ವಿಷಯದಲ್ಲಿ ಉಂಟಾಗಿದ್ದ ಭಿನ್ನಮತ ಶಮನವಾಗಿದೆ ಎಂದು ಹೇಳಲಾಗಿದ್ದರೂ ಆಂತರಿಕವಾಗಿ ಸಾಕಷ್ಟು ವ್ಯತ್ಯಾಸಗಳಿರುವುದು ಗುಟ್ಟಾಗಿ ಉಳಿದಿಲ್ಲ.  ಕಳೆದ ವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕಾರಿಣಿ ಸಭೆಗೆ ಈಶ್ವರಪ್ಪ ಗೈರು ಹಾಜರಾಗಿದ್ದು , ಪಕ್ಷದಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬುದನ್ನು ಸಾರಿ ಹೇಳುವಂತಿತ್ತು.
ಇದೀಗ ಖುದ್ದು ರಾಷ್ಟ್ರೀಯ ಅಧ್ಯಕ್ಷರೇ ಆಗಮಿಸುತ್ತಿರುವುದು ಕಾರ್ಯಕರ್ತರಲ್ಲಿ ನವೋಲ್ಲಾಸ ತಂದಿದ್ದರೆ ಪ್ರಮುಖ ನಾಯಕರಿಗೆ ಒಂದು ರೀತಿಯ ಆತಂಕ ಶುರುವಾಗಿದೆ.

ಇದಕ್ಕೆ ಕಾರಣ ಅಮಿತ್ ಶಾ ಅವರು ತಾವು ಮಾತನಾಡುವುದಕ್ಕಿಂತ ಇತರರ ಮಾತುಗಳನ್ನು ಕೇಳಿಸಿಕೊಂಡು ಖಡಕ್ ನಿರ್ಧಾರ ಕೈಗೊಳ್ಳುತ್ತಿರುವುದು ಮತ್ತು ಆ ನಿರ್ಧಾರಗಳು ಕಡ್ಡಿ ಮುರಿದಂತೆ ಇರುವುದು. ಪಕ್ಷದಲ್ಲಿ ಶಾ ಅವರ ಈ ಕಠಿಣ ನಿಲುವುಗಳು ಪಕ್ಷದಲ್ಲಿರುವ ಅಸಮಾಧಾನದ ಬಗ್ಗೆ ದೂರಲು ಮುಂದಾಗಿರುವ ನಾಯಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇನ್ನೊಂದೆಡೆ ಪಕ್ಷದ ಕಾರ್ಯತಂತ್ರಗಳನ್ನು ರೂಪಿಸುವಾಗ ಅವರು ನಾಯಕರ ಅಭಿಪ್ರಾಯಗಳನ್ನು ಆಲಿಸಿ ಮನನ ಮಾಡಿಕೊಳ್ಳುತ್ತಾರಾದರೂ ಅದಕ್ಕಿಂತ ಸ್ಥಳೀಯವಾಗಿ ತಾವು ಸಂಗ್ರಹಿಸಿದ ಮಾಹಿತಿಗಳನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಾರೆ ಮತ್ತು ಅದನ್ನು ಆಧರಿಸಿ ರಾಜ್ಯ ನಾಯಕರಿಗೆ ಬಿಸಿ ಮುಟ್ಟಿಸುವ ಕೆಲಸವನ್ನೂ ಮಾಡುತ್ತಾರೆ. ಇದು ಕೂಡ ರಾಜ್ಯ ಬಿಜೆಪಿ ನಾಯಕರಲ್ಲಿ ಸ್ವಲ್ಪ ಮಟ್ಟಿನ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ನಾಳೆ ರಾಜ್ಯ ಪದಾಧಿಕಾರಿಗಳು, ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಗಳು, ಎಲ್ಲಾ ಜಿಲ್ಲೆಗಳ ಪ್ರಭಾರಿಗಳು, ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರ ಜತೆ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ವಿಧಾನ ಪರಿಷತ್ ಸದಸ್ಯರೂ ಸೇರಿದಂತೆ ಶಾಸಕರು, ಸಂಸದರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.  ಪಕ್ಷದ ಕೋರ್ ಕಮಿಟಿ ಸಭೆಯನ್ನೂ ಮುಗಿಸಲಿದ್ದಾರೆ. ಆ ಮೂಲಕ ಮೊದಲ ದಿನವೇ ರಾಜ್ಯ ಬಿಜೆಪಿ ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿ ಬಗ್ಗೆ ಒಟ್ಟಾರೆ ಚಿತ್ರಣಗಳನ್ನು ಪಡೆದುಕೊಳ್ಳಲಿರುವ ಅಮಿತ್ ಶಾ ನಂತರವಷ್ಟೇ ಮುಂದಿನ ಹೆಜ್ಜೆ ಇಡುತ್ತಾರೆ.

ಮೂರು ದಿನಗಳ ಭೇಟಿಯಲ್ಲಿ ಮುಖ್ಯವಾಗಿ ಭಿನ್ನಮತ ಶಮನ, ಪಕ್ಷದ ಸಂಘಟನೆ, ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತೆರಳಿ ಪ್ರಚಾರಪಡಿಸುವುದು, ವಿಸ್ತಾರಕ್‍ನ ಪರಿಣಾಮಕಾರಿಯಾಗಿ ವಿಸ್ತರಿಸುವಂತೆ ನಿರ್ದೇಶನ ನೀಡಲಿದ್ದಾರೆ.
ಉತ್ತರ ಪ್ರದೇಶದಲ್ಲಿ ವಿಸ್ತಾರಕ್ ಯಶಸ್ವಿಯಾಗಿ ಮಾಡಿದ ಪರಿಣಾಮವೇ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಈ ಮಾದರಿಯನ್ನೇ ಕರ್ನಾಟಕದಲ್ಲೂ ವಿಸ್ತರಿಸುವುದು ಷಾ ಅವರ ಪ್ರಮುಖ ಕಾರ್ಯತಂತ್ರಗಳಲ್ಲೊಂದಾಗಿದೆ.

Facebook Comments

Sri Raghav

Admin